ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು-ಇಂಜಿನಿಯರ್ಸ್ ಡೇ ಆಚರಣೆ…

ಪುತ್ತೂರು: ವಿದ್ಯಾರ್ಥಿಗಳು ಪ್ರತಿ ಕ್ಷಣವನ್ನು ಮೌಲ್ಯಯುತವಾಗಿ ಬಳಸಿಕೊಂಡರೆ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಜಗತ್ತಿಗೆ ತಿಳಿಸಿಕೊಟ್ಟ ಸರ್.ಎಂ.ವಿಶ್ವೇಶ್ವರಯ್ಯನವರ ಜೀವನವು ನಮಗೆಲ್ಲರಿಗೂ ಆದರ್ಶವಾಗಿದೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ವಿದ್ಯಾರ್ಥಿ ಹಾಗೂ ಪರವಾನಿಗೆ ಪಡೆದ ಭೂಮಾಪಕ ವಿನೋದ್ ಕುಮಾರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ನಡೆದ ಇಂಜಿನಿಯರ್ಸ್ ಡೇ ಆಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತಾಡಿದರು. ಸಿವಿಲ್ ಇಂಜಿನಿಯರಿಂಗ್ ಮುಗಿಸಿದವರಿಗೆ ಸಾಕಷ್ಟು ಸರಕಾರಿ ಕೆಲಸಗಳು ಲಭ್ಯವಿದೆ, ಇದಕ್ಕಾಗಿ ಒಂದಷ್ಟು ಪೂರ್ವ ತಯಾರಿಯ ಅಗತ್ಯವಿದೆ ಎಂದರು. ಯಾವುದೇ ಕೆಲಸ ಮಾಡುವಾಗ ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಬೇಕು, ದಿನದಿಂದ ದಿನಕ್ಕೆ ಬದಲಾಗುವ ತಂತ್ರಜ್ಞಾನವನ್ನು ಇಂಜಿನಿಯರುಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಂಡು ಸಮಾಜದ ಉನ್ನತಿಗೆ ಮತ್ತು ರಾಷ್ಟ್ರದ ಏಳಿಗೆಗೆ ಶ್ರಮಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಮೂಲಸೌಕರ್ಯದಿಂದ ಹಿಡಿದು ತಂತ್ರಜ್ಞಾನದ ಪ್ರಗತಿಗಳವರೆಗೆ ಇಂಜಿನಿಯರುಗಳ ಕೊಡುಗೆ ಅಪಾರವಾದದ್ದು, ಪ್ರತಿಯೊಂದು ವಿಭಾಗದಲ್ಲಿಯೂ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಮುಂದೆ ಸರ್.ಎಂ.ವಿಶ್ವೇಶ್ವರಯ್ಯನವರ ದಣಿವರಿಯದ ನಿಸ್ವಾರ್ಥ ದುಡಿಮೆಯು ನಮಗೆಲ್ಲರಿಗೂ ದಾರಿದೀಪವಾಗಬಲ್ಲದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಉತ್ತಮವಾದ ಕಾರ್ಯಯೋಜನೆಯನ್ನು ತಯಾರಿಸಿ ಅದನ್ನು ಸರಿಯಾಗಿ ಅನುಷ್ಠಾನಗೊಳಿಸುವವನು ಮಾತ್ರ ಶ್ರೇಷ್ಟ ಇಂಜಿನಿಯರ್ ಆಗಬಲ್ಲ ಎಂದರು. ಸರ್.ಎಂ.ವಿ ಯವರು ದೇಶ ಕಂಡ ಅಪ್ರತಿಮ ಸಿವಿಲ್ ಇಂಜಿನಿಯರ್ ಆದರೂ ಬೇರೆಲ್ಲಾ ಕ್ಷೇತ್ರಗಳಲ್ಲೂ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಹಾಗಾಗಿ ಇಂಜಿನಿಯರ್ಸ್ ಡೇಯಲ್ಲಿ ಪ್ರತಿಯೊಬ್ಬ ಇಂಜಿನಿಯರ್ ಸಹಾ ಭಾಗವಹಿಸಿ ಅವರ ಶ್ರೇಷ್ಟತೆಯನ್ನು ಕೊಂಡಾಡುವುದರ ಜತೆಯಲ್ಲಿ ಅವರ ಸರಳತೆ, ಕನಿಷ್ಟವಾದ ಜೀವನ ಶೈಲಿ ಮತ್ತು ದೇಶಕ್ಕಾಗಿ ದುಡಿಯುವ ತುಡಿತ ಇವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮುಖ್ಯಸ್ಥ ವಿಖ್ಯಾತ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಸ್ವಾಗತಿಸಿದರು. ಪ್ರೊ.ಸ್ಮಿತಾ ವಿಶ್ವೇಶ್ವರಯ್ಯನವರ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಪವನ್‍ರಾಜ್ ವಂದಿಸಿ, ವಿದ್ಯಾರಣ್ಯ ಹಾಗೂ ಗೌತಮಿ ಕಾರ್ಯಕ್ರಮ ನಿರ್ವಹಿಸಿದರು.