ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ…

ಹಬ್ಬಗಳಿಂದ ಐಕ್ಯತೆ, ಸಾಮಾಜಿಕ ಜಾಗೃತಿಯೊಂದಿಗೆ ಪ್ರಗತಿ...

ಮಂಗಳೂರು: ‘ನಮ್ಮ ಹಬ್ಬಗಳಲ್ಲೆಲ್ಲ ಐಕ್ಯತೆಯ ಸಂದೇಶವಿದೆ. ಅಷ್ಟಮಿಯ ಆಚರಣೆಯಲ್ಲಿ ಅದು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ. ಶ್ರೀಕೃಷ್ಣನಂತಹ ಪುರಾಣ ಪುರುಷರ ಉಪದೇಶಗಳಿಂದ ಸಮಾಜದಲ್ಲಿ ಜಾಗೃತಿ ಮೂಡುವ ಜೊತೆಗೆ ವಿವಿಧ ಉದ್ಯಮ ರಂಗಗಳಲ್ಲಿ ವ್ಯಾಪಾರ ವಹಿವಾಟುಗಳ ಮೂಲಕ ಸಾಮಾಜಿಕ ಪ್ರಗತಿಯೂ ಸಾಧ್ಯವಾಗಿದೆ‌’ ಎಂದು ಮಾಜಿ ಅಕಾಡೆಮಿ ಸದಸ್ಯ, ಲೇಖಕ ಹಾಗೂ ಧಾರ್ಮಿಕ ಚಿಂತಕ ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಆಶ್ರಯದಲ್ಲಿ ಅಡ್ಯಾರು ಸೋಮನಾಥ ಕಟ್ಟೆ ಬಳಿ ಛತ್ರಪತಿ ಶಿವಾಜಿ ಮೈದಾನದ ಶ್ರೀಕೃಷ್ಣ ಕಲಾಮಂಟಪದ ಗೀತೋಪದೇಶ ಕಲಾವೇದಿಕೆಯಲ್ಲಿ ಜರಗಿದ 43ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
‘ಭಾರತೀಯ ಕಾವ್ಯಗಳಲ್ಲಿ ಪ್ರಸ್ಥಾನ ತ್ರಯಗಳೆಂದು ಕರೆಯಲ್ಪಡುವ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳಲ್ಲಿ ಮಾನವರ ಬದುಕನ್ನು ಸುಭಗಗೊಳಿಸುವ ಜೀವನ ಮೌಲ್ಯಗಳ ಪಾಠವಿದೆ. ಅದರಲ್ಲೂ ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯನ್ನು ಹಿಂದೂಗಳ ಪವಿತ್ರ ಧರ್ಮ ಗ್ರಂಥವೆಂದೆ ಭಾವಿಸಲಾಗಿದೆ’ ಎಂದವರು ನುಡಿದರು. ಶ್ರೀ ಕೃಷ್ಣನ ಭಾವಚಿತ್ರದ ಮುಂಭಾಗದಲ್ಲಿ ಗೋಪೂಜೆಯನ್ನು ನೆರವೇರಿಸಿ, ಗೋಗ್ರಾಸ ನೀಡಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅತಿಥಿಗಳು ಅಷ್ಟಮಿ ಉತ್ಸವವನ್ನು ಉದ್ಘಾಟಿಸಿದರು.

ಸಾಧಕರ ಸನ್ಮಾನ:
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 50ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಉದ್ಯಮಿ ಮತ್ತು ಸಮಾಜಸೇವಕರಾದ ಎ.ಕೆ. ಜಯರಾಮ ಶೇಖರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ರಂಗ ಕಲಾವಿದ ಪ್ರೀತಂ ಕುಮಾರ್ ಅಡ್ಯಾರ್, ಕುಸ್ತಿಪಟು ಕು|ಎಂ. ಅನುಷಾ ಅಡ್ಯಾರ್ ಮತ್ತು ಹತ್ತನೇ ಹಾಗೂ ಪಿಯುಸಿಯಲ್ಲಿ 90% ಶೇಕಡ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ವತಿಯಿಂದ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಭೆಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಸುರತ್ಕಲ್ ಶಾಸಕ ವೈ. ಭರತ್ ಶೆಟ್ಟಿ, ಪುತ್ತೂರು ಆದರ್ಶ ದಂತ ಚಿಕಿತ್ಸಾಲಯದ ಮಹೇಶ್ ಕುಮಾರ್ ವೈ , ಎನ್.ಪಿ.ಎಸ್.ಎನ್.ಅಟೋಮೇಟಿವ್ ಮಾರ್ಕೆಟಿಂಗ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವೃಷಭರಾಜ್ ಜೈನ್, ಎಸ್.ಎಸ್.ಡಿ.ಲೋಡ್ಜಿಸ್ಟಿಕ್ ಮಾಲಕ ಮೋಹನ್ ಕುಮಾರ್, ಎಸ್.ಎಸ್. ಬ್ರದರ್ಸ್ ಪಾರ್ಕಿಂಗ್ ಏಜೆನ್ಸೀಸ್ ಮುಖ್ಯಸ್ಥ ಶಿವರಾಜ್ ಅಡ್ಯಾರ್ ಅತಿಥಿಗಳಾಗಿದ್ದರು. ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ವಿವೇಕ್ ಪೂಜಾರಿ ಕೋಡಿಮಜಲು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಸಹ ಸಂಚಾಲಕ ಆನಂದ ಶೆಟ್ಟಿ ಅಡ್ಯಾರ್ ಸ್ವಾಗತಿಸಿದರು. ಸಂಚಾಲಕ ಪ್ರವೀಣ್ ಶೆಟ್ಟಿ ಆಡ್ಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಗೌರವಾಧ್ಯಕ್ಷ ಎ.ದಿವಾಕರ ನಾಯ್ಕ್ ಆರ್.ಕೆ.ಟ್ರಾವೆಲ್ಸ್, ಅಧ್ಯಕ್ಷ ಜಗದೀಶ್ ಶೆಟ್ಟಿ ಬಾಳಿಕೆ ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಕೃಷ್ಣ ಪೂಜಾರಿ ಆಡ್ಯಾರ್ ಪದವು ವಂದಿಸಿದರು. ಸಮಿತಿಯ ರಮೇಶ್ ತುಂಬೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ ಕಲ್ಲಡ್ಕ ಮತ್ತು ಅಶೋಕ್ ಕೊಟ್ಟಾರಿ ಪದವು ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ಬಳಿಕ ನೃತ್ಯ ಸಂಪದ ಅಡ್ಯಾರ್ ಇದರ ಸದಸ್ಯರಿಂದ ‘ರುಕ್ಮಿಣಿ ಸ್ವಯಂವರ’ ಯಕ್ಷಗಾನ ಪ್ರದರ್ಶನ ಜರಗಿತು.

whatsapp image 2025 09 17 at 2.39.54 pm

whatsapp image 2025 09 17 at 2.40.22 pm

whatsapp image 2025 09 17 at 2.40.23 pm

Related Articles

Back to top button