ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು-ಮಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟ…
ಪುತ್ತೂರು: ವಾಲಿಬಾಲ್ ಒಂದು ಪ್ರಾಚೀನ ಕ್ರೀಡೆ. ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಬಯಸುವ ಈ ಕ್ರೀಡೆಗೆ ಇತ್ತಿಚಿನ ದಿನಗಳಲ್ಲಿ ಪ್ರೋತ್ಸಾಹ ಕಡಿಮೆಯಾಗುತ್ತಿರುವುದು ಖೇದಕರ ಎಂದು ಪುತ್ತೂರು ವಾಲಿಬಾಲ್ ಅಸೋಸಿಯೇಶನ್‍ನ ಅಧ್ಯಕ್ಷ ಸತೀಶ್ ರೈ ಕಟ್ಟಾವು ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ಇಂದು(ನ.28) ನಡೆಯುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಅತಿ ಕಡಿಮೆ ಪರಿಕರ ಹಾಗೂ ಜಾಗದ ಅವಶ್ಯಕತೆ ಉಳ್ಳ ಈ ಕ್ರೀಡೆಯನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ಇಂದಿನ ಯುವಜನತೆಗೆ ಇದೆ ಎಂದು ಅವರು ಹೇಳಿದರು.
ಗೌರವ ಅತಿಥಿಗಳಾಗಿ ಆಗಮಿಸಿದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುವ ಕ್ರೀಡೆಗಳು ಶಾರೀರಿಕ ಉತ್ತೇಜನವನ್ನು ನೀಡುತ್ತವೆ. ಇಂಜಿನಿಯರಿಂಗ್‍ನಂತಹ ವೃತ್ತಿಪರ ಕಲಿಕಾ ವಿಭಾಗಗಳಲ್ಲಿ ಕ್ರೀಡಾಕೂಟಗಳನ್ನು ಸಂಘಟಿಸುವುದು ಮತ್ತು ಅದರಲ್ಲಿ ಪಾಲ್ಗೊಳ್ಳುವುದು ಕಷ್ಟಕರ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಶತಮಾನಕ್ಕೂ ಹಿಂದೆ ಬೇಸ್‍ಬಾಲ್ ಆಡುವುದಕ್ಕೆ ಕಷ್ಟವಾದ ಸಂದರ್ಭದಲ್ಲಿ ಹುಟ್ಟಿಕೊಂಡ ವಾಲಿಬಾಲ್ ಪಂದ್ಯಾಟ ನಂತರದ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿತು ಎಂದರಲ್ಲದೆ ಇಂತಹ ಕ್ರೀಡಾಕೂಟದ ಆಯೋಜನೆಗೆ ಕಾಲೇಜು ಸದಾ ಪ್ರೋತ್ಸಾಹವನ್ನು ನೀಡುತ್ತಿದ್ದು, ಈ ವರ್ಷ ಮಂಗಳೂರು ವಿಭಾಗ ಮಟ್ಟದ ಖೋಖೋ, ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟಗಳನ್ನು ಆಯೋಜಿಸಿದೆ ಎಂದರು.
ಪೆರ್ಲಂಪಾಡಿಯ ಷಣ್ಮುಖದೇವ ಪ್ರೌಡಶಾಲೆಯ ಸಂಚಾಲಕ ಶಿವರಾಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎರಡು ವಾಲಿಬಾಲ್ ಅಂಕಣದಲ್ಲಿ ಈ ಸ್ಪರ್ಧೆಗಳು ನಡೆಯುತ್ತಿದ್ದು, ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ 20 ತಂಡಗಳು ಇದರಲ್ಲಿ ಭಾಗವಹಿಸಿವೆ.
ಸಾತ್ವಿಕ್.ವಿ.ನಾಯಕ್ ಪ್ರಾರ್ಥಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ವಂದಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಹರಿಪ್ರಸಾದ್.ಡಿ ಕಾರ್ಯಕ್ರಮ ನಿರ್ವಹಿಸಿದರು.