ಶ್ರೀ ಪೂರ್ಣಾನಂದ ಸಹಕಾರಿ: ರೂ. 300 ಕೋಟಿ ಮೀರಿ ವ್ಯವಹಾರ, 11 ಶೇ. ಡಿವಿಡೆಂಡ್…

ಮಂಗಳೂರು: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಸ್ಥಾಪನೆಯಾದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ నిಯಮಿತವು ರೂ.300 ಕೋಟಿ ಮೀರಿ ವ್ಯವಹಾರ ನಡೆಸುವ ಮುಖೇನ ಅಪೂರ್ವ ಸಾಧನೆಗೈದಿದೆ. ಪ್ರಸಕ್ತ ಆರ್ಥಿಕ ಸಾಲಲ್ಲಿ 30 ಲಕ್ಷ ಮೀರಿ ಲಾಭ ಗಳಿಸಿರುವ ಸಂಸ್ಥೆ, ಸದಸ್ಯರಿಗೆ ಈ ಬಾರಿ ಶೇ. 11 ಡಿವಿಡೆಂಡ್ ನೀಡಲಿದೆ’ಯೆಂದು ಅಧ್ಯಕ್ಷ ಗಣೇಶ್ ಶೆಣೈ ಘೋಷಿಸಿದರು.
70 ಲಕ್ಷ ಷೇರು:
ಸೆ.14ರಂದು ಭಾನುವಾರ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್ ಶೆಣೈ ‘ಸಂಸ್ಥೆಯು ಪ್ರಸ್ತುತ 70 ಲಕ್ಷ ಷೇರು ಬಂಡವಾಳ, 35 ಕೋಟಿ ರೂ.ಠೇವಣಿಗಳು, 28 ಕೋಟಿ ವಿನಿಯೋಗಗಳು, 37 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಶ್ರೀ ಪೂರ್ಣಾನಂದ ಪ್ರೊಡಕ್ಟ್ಸ್ ವ್ಯಾಪಾರ ಒಳಗೊಂಡಂತೆ 300 ಕೋಟಿ ರೂ. ಮೀರಿ ವ್ಯವಹಾರ ದಾಖಲಿಸಿದೆ ‘ಎಂದು ಅಂಕಿಅಂಶ ನೀಡಿದರು. ‘ದೇಶ ಮಾತ್ರವಲ್ಲ ವಿದೇಶಗಳಲ್ಲಿರುವ ಸಂಸ್ಥೆ ಸದಸ್ಯರು ಗೂಗಲ್ ಪೇ ಮುಖೇನ ನಿರಖು ಠೇವಣಿ ಠೇವಣಿ, ಶೇರುಗಳನ್ನು ಪಡೆವ ಮೂಲಕ ಸಂಸ್ಥೆಯನ್ನು ಆರ್ಥಿಕವಾಗಿ ಬೆಂಬಲಿಸುತ್ತಿರುವುದು ನಂಬಿಕೆ, ಪ್ರೀತಿ ವಿಶ್ವಾಸಗಳ ಪ್ರತೀಕ’ವೆಂದವರು ತಿಳಿಸಿದರು. ಸಭೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಕಶೆಕೋಡಿ ಶ್ರೀಲಕ್ಷ್ಮೀ ವೆಂಕಟ್ರಮಣ ದೇಗುಲದ ಆಡಳಿತ ಮೊತ್ತೇಸರರಾಗಿ ಆಯ್ಕೆಯಾಗಿರುವ ಸುಧಾಕರ ಶೆಣೈ ದೀಪ ಪ್ರಜ್ವಲನಗೈದು ಮಹಾಸಭೆಯನ್ನು ಉದ್ಘಾಟಿಸಿದರು.
ವಿಶಿಷ್ಟ ಸಾಧನೆ: ಕುಕ್ಕುವಳ್ಳಿ
ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ‘ಸೌಹಾರ್ದ, ಸಾಮರಸ್ಯ ಹಾಗೂ ಕೃತಜ್ಞತೆಗಳು ಬದುಕಲ್ಲಿ ಮುಖ್ಯವೆಂಬ ಅಮೂಲ್ಯ ಪಾಠವನ್ನು ಸಹಕಾರಿ ಸಂಸ್ಥೆಗಳು ಬೋಧಿಸುತ್ತಿರುವುದು ಸುತ್ಯರ್ಹ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಅಪಾರವೆಂಬ ಸಿದ್ದಾಂತದೊಂದಿಗೆ ನಾವೆಲ್ಲ ದುಡಿಯಬೇಕಾಗಿದೆ. ಈ ದೇಶದ ಪ್ರಧಾನ ಆಸ್ತಿಯಾಗಿರುವ ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು. ‘ಇಂದಿನ ಪೈಪೋಟಿ ಯುಗದಲ್ಲಿ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳ ಜತೆ ಪೈಪೋಟಿ ನಡೆಸಲು ಸಹಕಾರಿ ಸಂಸ್ಥೆಗಳಿಗೆ ಪ್ರತ್ಯೇಕ ವೈಶಿಷ್ಟ್ಯಗಳಿರಬೇಕು ಮತ್ತು ಈ ತೆರನಾದ ವಿಶಿಷ್ಟತೆ ಶ್ರೀ ಪೂರ್ಣಾನಂದ ಸಂಸ್ಥೆಗಿದೆ’ ಎಂದವರು ಪ್ರಶಂಸಿಸಿದರು.
ಸಂಪರ್ಕ, ಸಂವಹನ ಸಂಸ್ಕಾರ ಅತ್ಯುತ್ತಮ:
ಸಂಜೀವ ಪಾಟೀಲ್ ಕುಡುವ, ರಾಮಚಂದ್ರ ಸಾಮಂತ್ ಕಾರವಾರ, ಕೇಶವ ಭಟ್ ಎಂ.ಪಿ. ಉಳ್ಳಾಲ ಇವರನ್ನು ಫಲ-ಸ್ಮರಣಿಕೆಗಳನ್ನು ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸುಧಾಕರ ಶೆಣೈ ಅವರನ್ನೂ ಫಲ- ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಶ್ರೀ ಪೂರ್ಣಾನಂದ ಸಂಸ್ಥೆಯ ಅಧ್ಯಕ್ಷ ನಿರ್ದೇಶಕರ ಸಹಿತ ಸಿಬ್ಬಂದಿಗಳೆಲ್ಲರ ಸಂಪರ್ಕಶೀಲತೆ, ಸಂವಹನ, ಸಂಸ್ಕಾರಗಳು ಅತ್ಯುತ್ತಮ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಖಂಡಿತವಾಗಿ ಉಜ್ವಲ ಭವಿಷ್ಯವಿದೆ’ ಎಂದು ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಮಾತನಾಡಿದ ಕೇಶವ ಭಟ್ ಎಂ. ಸಂಸ್ಥೆಗೆ ಯಾವುದೇ ಸಂದರ್ಭದಲ್ಲೂ ತಮ್ಮ ಸಹಕಾರದ ಭರವಸೆ ನೀಡಿದರು.
ಸ್ವಂತ ಕಟ್ಟಡದಲ್ಲಿ ರಜತ ಮಹೋತ್ಸವ:
’ಮುಂದಿನ 2027ಕ್ಕೆ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮ. ಆ ಕ್ಷಣಗಳನ್ನು ಸ್ವಂತ ಕಟ್ಟಡದಲ್ಲಿ ಆಚರಿಸಬೇಕೆಂಬ ಕನಸಿಗೆ ಮತ್ತು ಕನಸಿನ ಸಾಕಾರಕ್ಕೆ ತುಂಬು ಪ್ರಯತ್ನಗಳು ಸಾಗಿವೆ. ಈ ನಿಟ್ಟಿನಲ್ಲಿ ಉತ್ತಮ ಕಟ್ಟಡದ ಲಭ್ಯತೆಗೆ ಸಹಕರಿಸಿ’ ಎಂದು ಅಧ್ಯಕ್ಷ ಗಣೇಶ ಶೆಣೈ ಸದಸ್ಯರಿಗೆ ಮನವಿ ಮಾಡಿದರು. ‘ಪ್ರತೀ ವರ್ಷದಂತೆ ಈ ಬಾರಿಯೂ, ರಾಷ್ಟ್ರ ಸಂರಕ್ಷಣೆಯ ಕೈಂಕರ್ಯದಲ್ಲಿ ನಿರತರಾದ ದೇಶದ ಹೆಮ್ಮೆಯ ಸೇನಾಯೋಧರಿಗಾಗಿ ಶ್ರೀ ಪೂರ್ಣಾನಂದ ಸಹಕಾರಿಯು ವಿಶೇಷ ನಿಧಿಯನ್ನು ಬಜೆಟ್ ನಲ್ಲಿ ಕಾದಿರಿಸಿದೆ’ ಎಂದವರು ತಿಳಿಸಿದರು.
ಸಂಸ್ಥೆ ಮುಂದೆ ಬ್ಯಾಂಕ್ ಆಗಿ ಕಂಗೊಳಿಸಬೇಕೆಂಬ ಆಶಯ ವ್ಯಕ್ತಪಡಿಸಿದವರು ಹಿರಿಯ ಸದಸ್ಯ ರಾಮಚಂದ್ರ ಸಾಮಂತ್.
ಪ್ರತಿಭೆಗಳಿಗೆ ಪುರಸ್ಕಾರ:
ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ ಸಹಿತ ಅತ್ಯಧಿಕ ಅಂಕ ಪಡೆದ ಹಲವು ಪ್ರತಿಭೆಗಳು; ಕ್ರೀಡಾರಂಗ ಮತ್ತು ಚಿತ್ರಕಲಾ ರಂಗದಲ್ಲಿ ಮಿಂಚಿದ ಮಕ್ಕಳನ್ನು ಸಭೆಯಲ್ಲಿ ಪುರಸ್ಕರಿಸಲಾಯ್ತು. ಗೀತಾ ರತ್ನಾಕರ್ ವಿದ್ಯಾರ್ಥಿಗಳ ಯಾದಿಯನ್ನು ಓದಿದರು.
ಸಹಕಾರಿ ಪ್ರಮುಖರಾದ ಕೆ.ಮೋಹನ್ ನಾಯಕ್, ಜಗದೀಶ ಶೆಣೈ, ರವೀಂದ್ರ ಪ್ರಭು, ಸದಾನಂದ ಪ್ರಭು, ಅರವಿಂದ ಕುಮಾರ್ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ಅನಿತಾ ವೇದಿಕೆಯಲ್ಲಿದ್ದರು. ಸಂಸ್ಥೆಯ ನಿರ್ದೇಶಕ ಡಿ. ವಿಶ್ವನಾಥ್ ಕೆ. ಸಹಿತ ಆಗಲಿದ ಸದಸ್ಯರಿಗೆ ನುಡಿನಮನ ಸಲ್ಲಿಸಲಾಯಿತು.
ಆರಂಭದಲ್ಲಿ ಸಂಸ್ಥೆಯ ಮಾರಾಟ ಅಧಿಕಾರಿ ಬಿ.ಉಪೇಂದ್ರಕುಮಾರ್ ಗಣಪತಿ ಸ್ತುತಿ ಮಾಡಿದ್ದು, ಸಿಬ್ಬಂದಿಗಳಾದ ಸುಜಾತಾ ಮತ್ತು ಉಷಾ ಕುಮಾರಿ ಸಹಕಾರಿ ಗೀತೆ ಹಾಡಿದರು. ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿ ಪ್ರಸ್ತಾವಿಸಿದರು. ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಹೃಷಿಕೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಹರಿಶ್ಚಂದ್ರ ಪ್ರಭು ವಂದನಾರ್ಪಣೆ ಮಾಡಿದರು.