ರಂಗಕರ್ಮಿ ವಿಶ್ರಾಂತ ಶಿಕ್ಷಕ ಗೋವರ್ಧನ ಹೊಸಮನಿ ನಿಧನ…

ಮೂಡುಬಿದಿರೆ : ಹಿರಿಯ ರಂಗಕರ್ಮಿ ವಿಶ್ರಾಂತ ಮುಖ್ಯ ಶಿಕ್ಷಕ ,ಪತ್ರಕರ್ತ, ಸಾಹಿತ್ಯ ಸಾಂಸ್ಕೃತಿಕ ಚಿಂತಕ ಗೋವರ್ಧನ ಹೊಸಮನಿ (89 ವ) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು. ಅವರು ಪತ್ನಿ ಗೌರಾ ಗೋವರ್ಧನ್ ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಮೂಲತಹ ‌ ಇಲ್ಲಿನ ಆಚಾರ್ಯ ಕೇರಿಯ ಹೊಸಮನೆಯ ಗೋವರ್ಧನ್ ಹೊಸಮನಿ ಸಂಪಿಗೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಮುಖ್ಯ ಶಿಕ್ಷಕರಾಗಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಎರಡು ದಶಕಗಳಿಗೂ ಮಿಕ್ಕಿ ಅವರು ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದರು.
ರಂಗಭೂಮಿಯ ಚಟುವಟಿಕೆಗಳು ಪ್ರಧಾನವಾಗಿದ್ದ ಅರುವತ್ತರ ದಶಕದಲ್ಲಿ ಉದಯ ಕಲಾನಿಕೇತನ ರಂಗ ಸಂಸ್ಥೆಯನ್ನು ಸ್ಥಾಪಿಸಿ
ಪೌರಾಣಿಕ ಐತಿಹಾಸಿಕ ನಾಟಕಗಳನ್ನು ರಚಿಸಿ ರಾಜ ಹರಿಶ್ಚಂದ್ರ ,ಚಂದ್ರಗುಪ್ತ ಎಚ್ಚಮ್ಮನಾಯಕ ಹೀಗೆ ನಾಯಕ ನಟರಾಗಿಯೂ ಜನಪ್ರಿಯರಾಗಿದ್ದರು .
ಎಪ್ಪತ್ತೈದು ವರ್ಷಗಳ ಇತಿಹಾಸವಿರುವ ಮೂಡುಬಿದಿರೆಯ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆರಂಭಿಸಿದ ಸರಸ್ವತಿ ಸೇವಾ ಸಂಘದ ಕಾರ್ಯದರ್ಶಿಯಾಗಿ ಬಳಿಕ ಸಮಾಜಮಂದಿರ ಸಭಾ ಮುನ್ನಡೆಸಿದ ದಸರಾ ಉತ್ಸವದ ಸಂಚಾಲಕರಾಗಿ 35 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದಾರೆ.
ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ಸದಸ್ಯರಾಗಿ ಸಾಂಸ್ಕೃತಿಕ ಕಲಾಪಗಳ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ರಂಗನಿರ್ದೇಶಕ, ಸಂಗೀತ ಸಾಹಿತ್ಯಕಾರರಾಗಿ, ಕವಿ, ಲೇಖಕರಾಗಿದ್ದ ಅವರ ಕಥೆ ಕವನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮೂಡುಬಿದಿರೆ ಪಿಂಚಣಿದಾರರ ಸಂಘದ ಸ್ಥಾಪಕ ಸದಸ್ಯರಾಗಿ, ಮಾಜಿ ಅಧ್ಯಕ್ಷರಾಗಿ, ವರ್ಧಮಾನ ಪ್ರಶಸ್ತಿ ಪೀಠದ ಉಪಾಧ್ಯಕ್ಷರಾಗಿದ್ದ ಅವರು ಬೆಳ್ಮಣ್ ನಲ್ಲಿ ಜರಗಿದ ಕಾರ್ಕಳ ತಾಲೂಕು 5ನೇ ಸಾಹಿತ್ಯ ಸಮ್ಮೇಳನದ ಗೌರವ, ಮೂಡುಬಿದಿರೆ ಪ್ರೆಸ್ ಕ್ಲಬ್ ಗೌರವ ,ಎಂಸಿಎಸ್ ಬ್ಯಾಂಕ್, ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಸಹಿತ ಹಲವು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ.
ಹೊಸಮನಿ ಅವರ ನಿಧನಕ್ಕೆ ಸಮಾಜಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಡಾ. ಎಂ ಮೋಹನ ಆಳ್ವ ,ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯ ಅಧಿಕಾರಿ ಚಂದ್ರಶೇಖರ ಎಂ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಶ್ರೀಪತಿ ಭಟ್, ಪಿಂಚಣಿದಾರರ ಸಂಘದ ಅಧ್ಯಕ್ಷ ರಾಜಾರಾಮ್ ನಾಗರಕಟ್ಟೆ , ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ವೇಣು ಗೋಪಾಲ್, ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷ ಸಂಪತ್ ಡಿ. ಸಾಮ್ರಾಜ್ಯ ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Sponsors

Related Articles

Back to top button