ರಾಷ್ಟ್ರಸಂತನಿಗೆ ನುಡಿ ನಮನ…..

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಕ್ಯೈರಾದ ಹಿನ್ನಲೆಯಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
“ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಇರುವ ಶಾಸ್ತ್ರದ ಅರಿವಿನ ಆಳ, ವಿಸ್ತಾರಗಳು ವಿದ್ವಾಂಸರನ್ನೂ ನಿಬ್ಬೆರಗಾಗಿಸುತ್ತದೆ. ಅಧ್ಯಯನಕ್ಕೆ ಒಪ್ಪುವ ಸಮಯಸ್ಫೂರ್ತಿ, ಬೌದ್ಧಿಕ ತೀಕ್ಷ್ಣತೆಗಳು ದೈವದತ್ತ ಕೊಡುಗೆ. “ಸಾಂಬವಿಜಯ” ಎಂಬ ಸಂಸ್ಕ್ರತಕಾವ್ಯವನ್ನು ಶ್ರೀಗಳವರು ರಚಿಸಿದ್ದರು. ದಲಿತವರ್ಗವನ್ನು ನಮ್ಮ ಹಿಂದೂ ಸಮಾಜದ ಬಾಂಧವರನ್ನಾಗಿ ಪರಿಗಣಿಸಿದ ಮೊದಲ ಪೀಠಾಧಿಪತಿ ಶ್ರೀವಿಶ್ವೇಶತೀರ್ಥರು. “ಮಠಾಧಿಪತಿಗಳು ರಾಷ್ಟ್ರದ ನಾಗರಿಕರಾದುದರಿಂದ ಅವರಿಗೂ ಉಳಿದವರಿಗಿರುವ ರಾಜಕೀಯ ಹಕ್ಕುಗಳಿವೆ”ಎನ್ನುವ ಶ್ರೀಪಾದರು 1977ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಕ್ರಮವನ್ನು ವಿರೋಧಿಸಿ ಪತ್ರವನ್ನು ಬರೆದಿದ್ದರು. “ನನ್ನ ಧಾರ್ಮಿಕ ಅನುಷ್ಟಾನಗಳಿಗೆ ಅಡಚಣೆಯಾಗದಿದ್ದರೆ ಸೆರೆಮನೆ ಸೇರಲೂ ಸಿದ್ದ” ಎಂಬ ಧೋರಣೆಯ ಶ್ರೀಪಾದರು ಅಯೋಧ್ಯೆಯ ರಾಮಮಂದಿರ ನಿರ್ಮಾಣದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ” ಎಂದು ಶ್ರೀಗಳು ಮಾಡಿದ ಸಾಧನೆಯ ಕುರಿತು ಶಾಲಾ ಸಹ ಮುಖ್ಯಶಿಕ್ಷಕರಾದ ಸುಮಂತ್‍ಆಳ್ವ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಂತರ ಕಾಲಗರ್ಭದಲ್ಲಿ ಲೀನರಾದ ಸ್ವಾಮೀಜಿಗೆ ಮೌನ ಪ್ರಾರ್ಥನೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು