ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು- ಗಣರಾಜ್ಯೋತ್ಸವ ದಿನಾಚರಣೆ…
ಯುವ ಜನತೆ ಸಂವಿಧಾನದ ಆಶೋತ್ತರಗಳನ್ನು ತಿಳಿದುಕೊಂಡು ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ನಿರತರಾಗಬೇಕು- ವಿಶ್ವಾಸ್ ಶೆಣೈ...

ಪುತ್ತೂರು: ಯಾವುದೇ ವಿಷಯದಲ್ಲಿಯೂ ನೀತಿ-ನಿಯಮ ಹಾಗೂ ಕಾನೂನು ಚೌಕಟ್ಟಿದ್ದರೆ ಅಲ್ಲಿ ಶಿಸ್ತು ನೆಲೆಯಾಗುತ್ತದೆ. ಬಡವನಾಗಲಿ, ಶ್ರೀಮಂತನಾಗಲಿ ಸರ್ಕಾರದಲ್ಲಿ ಯಾರೇ ಇರಲಿ ಸಂವಿಧಾನವನ್ನು ಮೀರಿ ನಡೆಯುವಂತಿಲ್ಲ ಇದು ನಮ್ಮ ಪ್ರಜಾಪ್ರಭುತ್ವದ ಮಹತ್ವ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್.ಶೆಣೈ ಹೇಳಿದರು
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣವನ್ನು ಮಾಡಿ ಮಾತನಾಡಿದರು.
ನಮ್ಮ ಪ್ರಜಾಪ್ರಭುತ್ವವು ಕಾರ್ಯಾಂಗ ನ್ಯಾಯಾಂಗ ಹಾಗೂ ಶಾಸಕಾಂಗಗಳ ಮೂಲ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿನ ಪ್ರತಿಯೊಂದು ನಿಯಮಗಳು, ಕಾಯಿದೆಗಳು, ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ಯುವ ಜನತೆ ಸಂವಿಧಾನದ ಆಶೋತ್ತರಗಳನ್ನು ತಿಳಿದುಕೊಂಡು ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ನಿರತರಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಅಮೂಲ್ಯವಾದ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು, ಪ್ರಜಾಪ್ರಭುತ್ವದ ಪ್ರತಿಯೊಂದು ಘಟನೆಗಳಲ್ಲಿಯೂ ಭಾಗಿಗಳಾಗಬೇಕು, ತನ್ಮೂಲಕ ದೇಶದ ಅಭಿವೃದ್ದಿಗೆ ಪಣತೊಡಬೇಕು ಎಂದರು.
ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹಾಗೂ ಕಾರ್ಯಕ್ರಮ ಸಂಯೋಜಕ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಾತ್ವಿಕ್.ವಿ.ನಾಯಕ್, ಸುಮಂತ್ ಶರ್ಮ, ಭವಿಷ್ಯ ರೈ ಹಾಗೂ ಆಶಾ ರಾಷ್ಟ್ರಗೀತೆ ಹಾಗೂ ಧ್ವಜಗೀತೆಯನ್ನು ಹಾಡಿದರು.
ಪ್ರಯೋಗಾಲಯದ ಹಿರಿಯ ಬೋಧಕ ಹರಿಪ್ರಸಾದ್.ಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.