ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ “ಕಲಾಸ್ಪಂದನ 23″…
ಮಂಗಳೂರು : ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಸಾಂಸ್ಕೃತಿಕ ಸಂಭ್ರಮ “ಕಲಾಸ್ಪಂದನ – 23” ಕಾರ್ಯಕ್ರಮವು ಜೂ. 26 ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.
ಕ್ರೆಡೈ ಉಡುಪಿ ಮತ್ತು ಕರಾವಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷರು, ರಂಗಸ್ಥಳ ಸಾಂಸ್ಕೃತಿಕ ಸೇವಾ ಟ್ರಸ್ಟ್ ಅಧ್ಯಕ್ಷರು, ಸಮಾಜ ಸೇವಕರು ಹಾಗೂ ಸಾಯಿ ರಾಧಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಶ್ರೀ ಮನೋಹರ್ ಎಸ್. ಶೆಟ್ಟಿ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ನೇತ್ರಾವತಿ ಪಿ. ಎಸ್., ಕಲಾಸ್ಪಂದನ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್, ಕಲಾಸ್ಪಂದನ-23 ರ ವಿದ್ಯಾರ್ಥಿ ಸಮನ್ವಯಕಾರರಾದ ಕುಮಾರಿ ಸನ್ನಿಧಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಶ್ರೀ ಮನೋಹರ್ ಎಸ್. ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ತಮ್ಮ ನಾಯಕತ್ವ ಮತ್ತು ಸಾಂಸ್ಕೃತಿಕ ಸಾಮರ್ಥ್ಯಗಳನ್ನು ಉತ್ತೇಜಿಸಲು ಇಂತಹ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಯುವಕರು ತುಳುನಾಡಿನ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯನ್ನು ಬೆಳೆಸಬೇಕು, ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಬೇಕು. ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು, ದೃಢ ಸಂಕಲ್ಪ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಿ ಯಶಸ್ವಿ ಉದ್ಯಮಿಯಾಗಲು ಪ್ರಯತ್ನಿಸಬೇಕು ಎಂದು ಹೇಳಿದರು. ಇಂದಿನ ಯುವ ಜನಾಂಗವು ದುಶ್ಚಟಗಳಿಗೆ ಬಲಿಯಾಗುತ್ತಿದೆ. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯುವ ಜನತೆಯು ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದುಶ್ಚಟಗಳತ್ತ ಒಲವು ತೋರದಂತೆ ಮಾಡಲು ಸಾಧ್ಯ. ಕಲೆ, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪರಂಪರೆಯು ಯುವಕರನ್ನು ಉತ್ತಮ ಜೀವನಕ್ಕೆ ಪ್ರೇರೇಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸಮಯವು ಹರಿಯುವ ನೀರಿನಂತೆ, ಅದು ಎಂದಿಗೂ ಪುನರಾವರ್ತನೆಯಾಗುವುದಿಲ್ಲ, ಆದ್ದರಿಂದ ಸಮಯವನ್ನು ಮತ್ತು ಅವಕಾಶಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು ಹಾಗೂ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು.
ಅಧ್ಯಕ್ಹೀಯ ಭಾಷಣವನ್ನು ಮಾಡಿದ ಡಾ. ಥಾಮಸ್ ಪಿಂಟೋ ರವರು ಮಾತನಾಡಿ, ಕಾರ್ಯಕ್ರಮವನ್ನು ಸಂಘಟಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ತುಳುನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯವು ಎಲ್ಲರಿಗೂ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡುತ್ತಿದೆ ಎಂದು ಹೇಳಿದರು.
ಡಾ. ನೇತ್ರಾವತಿ ಪಿ. ಎಸ್. ಸ್ವಾಗತ ಭಾಷಣವನ್ನು ಮಾಡಿದರು.ಕಲಾಸ್ಪಂದನ 23 ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿ ಶ್ರೀ ಮನೋಹರ್ ಎಸ್. ಶೆಟ್ಟಿ ಯವರನ್ನು ಸಭೆಗೆ ಪರಿಚಯಿಸಿದರು ಹಾಗೂ ಕಲಾಸ್ಪಂದನ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ನೀಡಿದರು.
ಕಲಾಸ್ಪಂದನ ಪ್ರಯುಕ್ತ ಕಳೆದ ಒಂದು ವಾರದಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಪ್ರೊ. ಶ್ವೇತಾ ಪೈ ಯವರು ಸಭೆಗೆ ತಿಳಿಸಿದರು.
ಮುಖ್ಯ ಅತಿಥಿ ಶ್ರೀ ಮನೋಹರ್ ಎಸ್. ಶೆಟ್ಟಿ ಯವರು ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಕುಮಾರಿ ಶ್ರೀನಿಧಿ ಪ್ರಾರ್ಥನೆಯನ್ನು ಮಾಡಿದರು.
ಪ್ರೊ. ರೋಹನ್ ಫೆರ್ನಾಂಡಿಸ್ ವಂದನಾರ್ಪಣೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸುಮಾರು ನಾಲ್ಕು ಗಂಟೆಗಳ ಕಾಲ “ಪರಂಪರಾ” (ಸಾಂಪ್ರದಾಯಿಕ ಸಂಸ್ಕೃತಿಯ ದೈವತ್ವ) ಹಿನ್ನಲೆಯನ್ನು ಆಧರಿಸಿ ಆಯೋಜಿಸಿದ್ದ ವಿವಿಧ ಮನೋರಂಜನಾ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಟ್ರೋಫಿಯನ್ನು ವಿತರಿಸಲಾಯಿತು.
ವಿದ್ಯಾರ್ಥಿನಿ ಕುಮಾರಿ ವೈಷ್ಣವಿ ಶಣೈ ಮತ್ತು ಕುಮಾರಿ ನೇಹಾ ಕರುಣಾಕರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಸಹ ಸಂಚಾಲಕರಾದ ಪ್ರೊ. ತನ್ಮಯಿ ಸುಶೀಲ್ ಮತ್ತು ಪ್ರೊ. ಸ್ವರ್ಣ ಹೆಚ್. ಆರ್, ಕಾಲೇಜಿನ ಉಪನ್ಯಾಸಕರು, ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.