ನಗೆಹಬ್ಬ ಮತ್ತು ವ್ಯಂಗ್ಯ ಚಿತ್ರ, ಪ್ರಾತ್ಯಕ್ಷಿಕೆ…
ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕ ಮತ್ತು ಕನ್ಯಾನದ ಶ್ರೀ ಗುರು ಶೈಕ್ಷಣಿಕ ಟ್ರಸ್ಟ್ ನ ಸರಸ್ವತಿ ವಿದ್ಯಾಲಯಗಳು ಜಂಟಿಯಾಗಿ ವಿದ್ಯಾರ್ಥಿಗಳಿಗೆ ಹಾಸ್ಯಪ್ರಜ್ಞೆ ಯ ಮಹತ್ವ ತೋರುವ ಸಲುವಾಗಿ ಕನ್ಯಾನದ ಶಾಲಾ ಸಭಾ ಭವನದಲ್ಲಿ ನಗೆ ಹಬ್ಬ ಮತ್ತು ವ್ಯಂಗ್ಯ ಚಿತ್ರ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿಕೆಗಳನ್ನು ಜೂ. 24 ರಂದು ಯಶಸ್ವಿಯಾಗಿ ನಡೆಸಿದವು.
ಸಂಪನ್ಮೂಲ ವ್ಯಕ್ತಿ ಗಳಾಗಿ ಖ್ಯಾತ ಹಾಸ್ಯ ಸಾಹಿತಿ ಡಾ ಭುವನೇಶ್ವರಿ ಹೆಗಡೆ ಮತ್ತು ಖ್ಯಾತ ವ್ಯಂಗ್ಯ ಚಿತ್ರ ಸಾಹಿತಿ ವೆಂಕಟ್ ಭಟ್ ಎಡನೀರು ಭಾಗವಹಿಸಿದ್ದರು.ಪರಿಷತ್ತಿನ ಅಧ್ಯಕ್ಷ ಡಾ ಸುರೇಶ್ ನೆಗಳಗುಳಿ ಮತ್ತು ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಮುಖ್ಯ ಅತಿಥಿಗಳಾಗಿದ್ದರು.
ಶಾಲಾ ಮುಖ್ಯಸ್ಥ ಈಶ್ವರ ಪ್ರಸಾದ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮಕ್ಕಳಿಂದ ಪ್ರಾರ್ಥನೆಯಾದ ಬಳಿಕ ಅತಿಥಿಗಳಿಂದ ದೀಪ ಬೆಳಗಿಸಿ ಉದ್ಘಾಟನೆ ಮಾಡಲಾಯಿತು. ಶ್ರೀ ಜಯಾನಂದ ಪೆರಾಜೆ ಪ್ರಾಸ್ತಾವಿಕ ನುಡಿ ಸಹಿತ ಸ್ವಾಗತ ಮಾಡಿದರು.
ಭುವನೇಶ್ವರಿ ಹೆಗಡೆಯವರು ನಗುವಿನ ಮಹತ್ವ ತನ್ಮೂಲಕ ಅದು ಹೇಗೆ ಬುದ್ಧಿಯ ಬೆಳವಣಿಗೆಯ ಮೇವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾ ಹಲವಾರು ಆನ್ವಯಿಕ ನಗೆ ಚಟಾಕಿಗಳನ್ನು ಪ್ರಸ್ತುತ ಪಡಿಸಿದರು.
ಶ್ರೀ ವೆಂಕಟ್ ಭಟ್ ಎಡನೀರು ಅವರು ವ್ಯಂಗ್ಯ ಚಿತ್ರಕಲೆಯ ವಿಧಿ ವಿಧಾನಗಳನ್ನು ಬರೆದು ಮಕ್ಕಳಿಂದ ಬರೆಯಿಸಿ ತೋರಿಸಿದರಲ್ಲದೆ ವ್ಯಂಗ್ಯ ಭರಿತ ಚುಟುಕು ಗಳನ್ನು ವಾಚಿಸಿದರು.
ಡಾ ಸುರೇಶ ನೆಗಳಗುಳಿಯವರು ನಗೆಯು ಬದುಕಿನ ಅವಿಭಾಜ್ಯ ಅಂಗವಾದಾಗ ಸೌಖ್ಯ ಸಿದ್ಧಿಸುತ್ತದೆ, ಮುಖದ ಸ್ನಾಯುಗಳು ಹೆಚ್ಚು ಕಾರ್ಯಕ್ಷಮತೆಗೊಳಗಾಗಿ ಮಾನಸಿಕ ಹಾಗೂ ಭೌದ್ಧಿಕ ಉಲ್ಲಾಸಕ್ಕೆ ಕಾರಣವಾಗುತ್ತದೆ ಎಂದರಲ್ಲದೆ ನಗುವಿನ ಕುರಿತಾದ ಏಳೆ ಕವನ ಹಾಗೂ ಮುಕ್ತಕ ವಾಚಿಸಿದರು.
ಶಾಲಾ ಮುಖ್ಯಸ್ಥ ಶ್ರೀ ಈಶ್ವರ ಪ್ರಸಾದ್ ರವರು ಶಾಲಾ ಮಕ್ಕಳ ಸುಲಲಿತ ಚಟುವಟಿಕೆಗಳಿಗೆ ಪೂರಕವಾಗಿ ಇತರೇತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಇರುವುದಲ್ಲದೆ ನಗೆ ಚಟಾಕಿ ಹಾಗೂ ವ್ಯಂಗ್ಯ ಚಿತ್ರಗಳು ಬೆಳೆಯುವ ಮಕ್ಕಳಿಗೆ ಖಿನ್ನತೆಯಾಗದಿರಲು ಸಹಕಾರಿ ಎಂದರು.
ಖ್ಯಾತ ಸಾಹಿತಿ,ಪ್ರಾಚಾರ್ಯ ಶ್ರೀ ಪಿ.ಎನ್ ಮೂಡಿತ್ತಾಯ ಮತ್ತು ಅಭಾಸಾಪ ಸದಸ್ಯ ಶ್ರೀ ಕುಮಾರ ಸ್ವಾಮಿ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ ಸರಸ್ವತಿಯವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಮಧುರಾ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸುವ ಮೂಲಕ ಕಾರ್ಯಕ್ರಮ ಸಾಂಗವಾಗಿ ಮುಕ್ತಾಯವಾಯಿತು.ಸಹ ಅಧ್ಯಾಪಿಕೆ ಬೇಬಿ ನಿರ್ವಹಣೆ ಮಾಡಿದ್ದರು.