ಲಂಚ ಪ್ರಕರಣ: ರಾಮಕುಂಜ ಗ್ರಾಮಕರಣಿಕ ಬಂಧನ…..
ಪುತ್ತೂರು: ಖಾತಾ ಬದಲಾವಣೆಗೆ ವಿಚಾರಕ್ಕೆ ಸಂಬಂಧಿಸಿ ಗ್ರಾಮಸ್ಥರೊಬ್ಬರಿಂದ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗ್ರಾಮಕರಣಿಕ ದುರ್ಗಪ್ಪ (24) ಎಂಬವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಬಂಧಿತರಾಗಿದ್ದಾರೆ.
ರಾಮಕುಂಜ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ, ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬತ್ತನ ಹಳ್ಳಿ ನಿವಾಸಿಯಾಗಿರುವ ದುರ್ಗಪ್ಪ ಅವರು ಹಳೆನೇರಂಕಿ ಗ್ರಾಮದ ಕಾಪಿಕಾಡು ನಿವಾಸಿ ಶರತ್ ಪಿ.ಎನ್ ಎಂಬವರಿಂದ ಲಂಚ ಪಡೆಯಲು ಮುಂದಾಗಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಹಳೆನೇರಂಕಿ ಗ್ರಾಮದ ಪ್ರಭಾರವನ್ನು ಇವರು ವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಗ್ರಾಮದ ಕಾಪಿಕಾಡು ನಿವಾಸಿ ಶರತ್ ಅವರು ತನ್ನ ದೊಡ್ಡಪ್ಪನ ಹೆಸರಿನಲ್ಲಿರುವ ಜಾಗವನ್ನು ತನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವಂತೆ ಕಳೆದ ಫೆ.20ರಂದು ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆಗಾಗಿ ಸೆ.12ರಂದು ಅರ್ಜಿದಾರರಿಗೆ ನೋಟೀಸು ನೀಡಲಾಗಿತ್ತು. ಬಳಿಕ ಖಾತೆ ಬದಲಾವಣೆಗೆ ಮಾಡಿಕೊಡಲು ರೂ.20ಸಾವಿರ ನೀಡುವಂತೆ ಗ್ರಾಮಕರಣಿಕ ದುರ್ಗಪ್ಪ ಅವರು ಬೇಡಿಕೆ ಇಟ್ಟಿದ್ದರು. ಈ ಪೈಕಿ ರೂ.5 ಸಾವಿರವನ್ನು ದುರ್ಗಪ್ಪ ಅವರಿಗೆ ನೀಡಲಾಗಿತ್ತು. ಆದರೆ ದುರ್ಗಪ್ಪ ಅವರು ಮತ್ತೆ ಉಳಿದ ಹಣ ನೀಡುವಂತೆ ಬೇಡಿಕೆ ಮುಂದಿಟ್ಟು ಸತಾಯಿಸತೊಡಗಿದ್ದರು. ಈ ಹಿನ್ನಲೆಯಲ್ಲಿ ಅರ್ಜಿದಾರ ಶರತ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಖಾತೆ ಬದಲಾವಣೆಗೆ ಸಂಬಂಧಿಸಿ ಬೇಡಿಕೆ ಮುಂದಿಟ್ಟ ಉಳಿದ ಹಣವನ್ನು ನೀಡುವಂತೆ ಸತಾಯಿಸುತ್ತಿದ್ದ ದುರ್ಗಪ್ಪ ಅವರು ಗುರುವಾರ ಅರ್ಜಿದಾರ ಶರತ್ ಅವರನ್ನು ತನ್ನದೇ ಬೈಕ್‍ನಲ್ಲಿ ಕುಳ್ಳಿರಿಸಿಕೊಂಡು ಬಂದು ಪುತ್ತೂರು ನಗರದ ಮುಖ್ಯ ರಸ್ತೆಯ ಕರ್ನಾಟಕ ಬ್ಯಾಂಕ್ ಬಳಿ ಅರ್ಜಿದಾರರಿಂದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಪತ್ತೆಮಾಡಿ ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡು ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೊಳಪಡಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಶ್ಯಾಮ ಸುಂದರ್ ಮತ್ತು ಯೋಗೀಶ್, ಹೆಡ್ ಕಾನ್ಸ್ಟೇಬಲ್ ಗಳಾದ ರಾಧಾಕೃಷ್ಣ, ರಾಧಾಕೃಷ್ಣ ಇ.ಎ, ಉಮೇಶ್, ರಾಕೇಶ್, ರಾಜೇಶ್, ಕಾನ್ಸ್ಟೇಬಲ್ ಗಳಾದ ಪ್ರಶಾಂತ್, ವೈಶಾಲಿ ಮತ್ತು ಗಣೇಶ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.