ಏಪ್ರಿಲ್ 1 – ಹೈಕೋರ್ಟ್ ವಕೀಲರ ಬೆಂಗಳೂರು ಯಕ್ಷೋತ್ಸವಕ್ಕೆ ಹತ್ತರ ಸಂಭ್ರಮ…
ಬೆಂಗಳೂರು: ಹೈಕೋರ್ಟಿನ ಯಕ್ಷಗಾನಾಭಿಮಾನಿ ವಕೀಲರು ಜತೆಸೇರಿ ನಡೆಸುವ ಬೆಂಗಳೂರು ಯಕ್ಷೋತ್ಸವಕ್ಕೆ 2023 ಕ್ಕಾಗುವಾಗ ದಶಮಾನೋತ್ಸವ ಸಂಭ್ರಮ. ಅಂದರೆ ಈ ಬಾರಿ ಏಪ್ರಿಲ್ 1 ರಂದು ಶನಿವಾರ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಪರಾಹ್ನ 2 ರಿಂದ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ| ಹೆಚ್ ಟಿ ಪ್ರಭಾಕರ ಶಾಸ್ತ್ರೀ, ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ ಕೆ ರಾಜೇಶ್ ರೈ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ| ಎಂ ಮೋಹನ್ ಆಳ್ವ, ಕಲಾಪೋಷಕ ಡಾ| ಟಿ ಶ್ಯಾಮ್ ಭಟ್ ಇವರ ಘನ ಉಪಸ್ಥಿತಿಯಲ್ಲಿ ‘ಆಟ’ ನಡೆಯಲಿದೆ. ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ , ಹನುಮಗಿರಿ ಇವರು ವಿಶೇಷ ಸಂಯೋಜನೆಯೊಂದಿಗೆ “ರಾಮಕಾರುಣ್ಯ – ಶೂರ್ಪನಖಾ ಮಾನಭಂಗ ” ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಸಿಕೊಡಲಿದ್ದಾರೆ. ಎಂದಿನಂತೆ ಬೆಂಗಳೂರಿನ ಯಕ್ಷಗಾನಾಭಿಮಾನಿ ವಕೀಲರು ಈ ಉಚಿತ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿದ್ದಾರೆ.
ನಡೆದು ಬಂದ ದಾರಿ…
ಕರಾವಳಿಯ ಪರಿಪೂರ್ಣ ಕಲೆಯೆಂದು ಮಾನಿತವಾಗಿ, ಜಾಗತಿಕ ನೆಲೆಗಟ್ಟನ್ನು ಕಂಡುಕೊಂಡಿರುವ ಯಕ್ಷಗಾನವನ್ನು ಸಂಭ್ರಮಿಸುವುದಕ್ಕೆ ಯಾವ ಕಾರಣಗಳೂ- ನೆವನಗಳೂ ಅನಿವಾರ್ಯವಲ್ಲ. ಜಾತಿ-ಮತ-ದೇಶ-ಕಾಲ-ಲಿಂಗ- ಧರ್ಮ-ವಯಸ್ಸು – ವೃತ್ತಿಗಳ ಅಂತರವನ್ನು ಯಕ್ಷಗಾನ ದಾಟಿ ಶತಮಾನಗಳೇ ಕಳೆದಿವೆ. ಅದೇ ರೀತಿಯಲ್ಲಿ ಬೆಂಗಳೂರಿನ ಹೈಕೋರ್ಟಿನ ಯಕ್ಷಗಾನಾಭಿಮಾನಿ ವಕೀಲರು ಬೆಂಗಳೂರಿನಲ್ಲೇ ಆಯೋಜಿಸುತ್ತಿರುವ ಬೆಂಗಳೂರು ಯಕ್ಷೋತ್ಸವ 10 ನೇ ವರ್ಷಕ್ಕೆ ಕಾಲಿಟ್ಟಿರುವುದು ವಿಶೇಷವೇ ಸರಿ.
ನ್ಯಾಯವಾದಿ ವೃತ್ತಿ ನಿಮಿತ್ತವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಬಂದು, ಉಚ್ಛ ನ್ಯಾಯಾಲಯದಲ್ಲಿ ನೆರಳಿನಾಶ್ರಯ ಪಡೆದ ಸಮಾಜದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ವರ್ಗವೆಂದು ಸಮುದಾಯ ಗುರುತಿಸುವ ಮಂದಿ ಕರಾವಳಿಯ ಯಕ್ಷ ಕಲೆಯನ್ನು , ಅದರ ವಿಭಿನ್ನ ಭೂಮರೂಪಗಳನ್ನು ಆರಾಧಿಸುತ್ತಾ ಬಂದಿರುವುದಕ್ಕೂ – ಸಂಭ್ರಮಿಸುತ್ತಿರುವುದಕ್ಕೂ ದಶಮಾನೋತ್ಸವದ ಮಿನುಗು ರೇಖೆ ಮೂಡಿದೆಯೆನ್ನುವುದು ಕಲೆಗೂ, ವೃತ್ತಿಗೂ, ಅಭಿರುಚಿಗೂ ಸಂಸ್ಕೃತಿಗೂ ಸಂದ ಮೌಲ್ಯ.
ಪ್ರತಿವರ್ಷ ಸುಪ್ರಸಿದ್ದ ಕಲಾವಿದರನ್ನು ಕರೆಸಿ ‘ಆಟ ‘ ಆಡಿಸುವುದು ಹೈಕೋರ್ಟ್ ವಕೀಲರ ಯಕ್ಷಗಾನಾಭಿಮಾನಿ ಸಮಾನ ಮನಸ್ಕರ ಪದ್ಧತಿ. ಕರಾವಳಿಯವರು ಮಾತ್ರವೇ ಅಲ್ಲದೆ ತುಳುವೇತರರೂ ಬಳಗದಲ್ಲಿ ಪಾಲುದಾರರೆನ್ನುವುದು ಗಮನಾರ್ಹ. ಊರಿನಿಂದ ಬ್ಯಾಂಡ್ ಸೆಟ್ , ಗರ್ನಾಲು ಇತ್ಯಾದಿ ತರಿಸಿದ್ದುಂಟು.ದೇವಿ ಮಹಾತ್ಮೆ ಯಂತಹ ಅಬ್ಬರದ – ಪುಣ್ಯ ಪ್ರಸಂಗಗಳನ್ನು ದೊಂದಿ- ರಾಳ ಸಹಿತ ಬೆಳಗ್ಗಿನ ವರೆಗೂ ಆಡಿಸಿದ್ದುಂಟು.
ಚೌಕಿ ಪೂಜೆ, ಕಲಾವಿದರೊಡನೆ ಉಭಯ ಕುಶಲೋಪರಿ , ಭಕ್ಷೀಸು, ಚರಂಬೂರಿ, ಸೋಜಿ ಇದರೊಂದಿಗೆ ಬೆಂಗಳೂರು ಸ್ಪೆಷಲ್ ಖಾದ್ಯಗಳೊಂದಿಗೆ ಯಕ್ಷಗಾನೇತರ ಆದರೆ ಯಕ್ಷಗಾನಾಸ ಅವಿಭಾಜ್ಯ ರಂಜನೆಗಳೇ ಆಗಿರುವ ಎಲ್ಲವನ್ನೂ ಸಂಭ್ರಮಿಸಿದ್ದುಂಟು.
ಕರಾವಳಿಯ ಹೈಕೋರ್ಟ್ ವಕೀಲರ ಮುಖ್ಯವಾಗಿ ಮಾಣಿಯ ಸುಧಾಕರ ಪೈ ಮತ್ತಿತರರ ನೇತೃತ್ವದಲ್ಲಿ ಈ ಹತ್ತು ವರ್ಷಗಳಲ್ಲಿ ಯಕ್ಷೋತ್ಸವ ನಡೆದಿದೆ. ಇಂತಹ ವಾರ್ಷಿಕ ಕಟ್ಟು ಕಟ್ಟಳೆಗಳಲ್ಲದೆ ನಡು ನಡುವೆ ಬಂದು ಹೋಗುವ ತೆಂಕು-ಬಡಗು, ಮಹಿಳಾ-ಮಕ್ಕಳ ಆಟ-ಕೂಟಗಳಲ್ಲಿ ಈ ವಕೀಲರು ಪಾಲು ಪಡೆದೇ ಪಡೆದಿದ್ದಾರೆ. ಯಕ್ಷಗಾನ ಕ್ಷೇತ್ರದ ಬಹು ಪ್ರತಿಷ್ಠಿತ ಖಾಸಗಿ ಗೌರವವೆಂದು ಖ್ಯಾತಿವೆತ್ತ ಸಂಪಾಜೆ ಯಕ್ಷೋತ್ಸವದ “ಕಲಾಪೋಷಕ ” ಪುರಸ್ಕಾರ ನ್ಯಾಯವಾದಿ ಸುಧಾಕರ ಪೈಗಳಿಗೆ ಕೊಡಲ್ಪಟ್ಟಿರುವ ಹಿನ್ನಲೆಯಲ್ಲಿ ಈ 10 ವರ್ಷಗಳ ಅಧಿಕೃತ ಕಲಾಸೇವೆಯ ಪರಿಗಣನೆಯೂ ಇದೆ. ಇನ್ನು ಮೇಳದ ಯಜಮಾನರು, ಕಲಾಸಂಘಟಕರು, ಸಂಯೋಜಕರು , ಕಲಾವಿದರು ಬೆಂಗಳೂರಿನದ್ದೇ ಯಕ್ಷಸಂಸ್ಥೆಗಳ ಪ್ರಾಯೋಜಕರ ಪಟ್ಟಿಯಲ್ಲಂತೂ ಬೆಂಗಳೂರಿನ ವಕೀಲರಿಗೆ ಆದ್ಯತೆ.
ಪರಿಣಾಮವಾಗಿ ಬೆಂಗಳೂರಿನಲ್ಲೂ ಯಕ್ಷಗಾನ ನೆಲೆ ಕಂಡಿದೆ.ಹತ್ತಾರು ಸಂಸ್ಥೆಗಳು ಮೈ ತಾಳಿವೆ.ಮಂಗಳೂರು ವಕೀಲರ ಸಂಘದವರೂ ಪ್ರೇರಣೆ ಪಡೆದು ಕಳೆದ ಮೂರು ವರ್ಷಗಳಿಂದ ಕಲಾರಾಧನೆ ನಡೆಸುತ್ತಿದ್ದಾರೆ.ಒಂದು ವೇಳೆ ಬೆಂಗಳೂರಿನ ಯಕ್ಷೋತ್ಸವ ಆಯೋಜನೆ ತುಸು ವಿಳಂಬವಾದರೆ “ಏನು ಪೈಗಳೇ, ಈ ಸಲ ಆಟ ಇಲ್ವಾ?” ಎಂದು ಹೈಕೋರ್ಟ್ ಜಡ್ಜ್ ರೂ ಕುತೂಹಲಿಸುವಂತಾಗಿದೆ.
ವರ್ಷದಿಂದ ವರ್ಷಕ್ಕೆ ಎಲ್ಲಾ ಪ್ರತಿಕೂಲ – ಅನುಕೂಲ ವಾತಾವರಣವನ್ನು ಅನುಸರಿಸಿಕೊಂಡು ವಕೀಲರು ‘ಆಟ’ ಮಾಡಿದ್ದಾರೆ. ಕಾಲಮಿತಿ, ಸಂಯೋಜಿತ, ಮೇಳಗಳ ಆಟ – ಹೀಗೆ ಎಲ್ಲ ಅಡಕವಾಗಿದೆ.ಕಾನೂನಿನ ಮಿತಿಯೊಳಗೇ ಎಲ್ಲವನ್ನೂ ಮಾಡುವ ಜಾಣ್ಮೆ ಇವರಿಗೆ ಹೇಗೂ ಇದ್ದೇ ಇದೆ. ಹೈಕೋರ್ಟ್ ವಕೀಲರಲ್ಲವೇ??…
ಯಕ್ಷಗಾನಂ ಗೆಲ್ಗೆ…
ಬರಹ: ಕೆ. ವಿ . ರಮಣ್, ಮೂಡುಬಿದಿರೆ
8792158946