ಕಾರ್ಮಿಕರ ಹಿತಾಸಕ್ತಿಗೆ ಸರಕಾರ ಸ್ಪಂದನೆ – ಟಿ ಎಂ ಶಾಹಿದ್ ತೆಕ್ಕಿಲ್…
ಸುಳ್ಯ: ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇದರ ಅಧ್ಯಕ್ಷ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಸಂಪಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಮತ್ತು ಮಂಗಳೂರು ವಿಭಾಗದ ವತಿಯಿಂದ ನಡೆದ ಕಾರ್ಮಿಕರ ಸೌಲಭ್ಯಗಳ ಮಾಹಿತಿ ಕಾರ್ಯಗಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಡಿದ ಅವರು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕೆಲವೊಂದು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ರಕ್ಷಾ ಕವಚ, ತಲೆಗೆ ಹೆಲ್ಮೆಟ್, ಕಾಲಿಗೆ ಶೂ ಮತ್ತು ಕೆಲಸ ಮಾಡುವ ಸಮಯದಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಪ್ರಥಮ ಚಿಕಿಸ್ಥೆಯನ್ನು ಪಡೆದು ಹೆಚ್ಚಿನ ಚಿಕಿಸ್ಥೆಗಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಸರಕಾರದಿಂದ ಪರಿಹಾರ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಕಾರ್ಮಿಕರಿಗೆ ಮನೆ ಕಟ್ಟುವಾಗ ಹಾಗೂ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯಕ್ಕೆ ಸರಕಾರ ಕೊಡುವ ಸಹಾಯ ಧನ,ಸ್ಕಾಲರ್ ಶಿಫ್ ಮತ್ತು ಕೆಲಸದ ಸಂದರ್ಭದಲ್ಲಿ ಉಂಟಾಗುವ ಅನಾಹುತಗಳಿಗೆ ಸರಕಾರ ಕೊಡುವ ಸವಲತ್ತುಗಳ ಮಾಹಿತಿಯನ್ನು ನೀಡಿ ಸದುಪಯೋಗ ಪಡಿಸಿ ಎಂದು ಕರೆ ನೀಡಿದ ಅವರು ಕಾರ್ಮಿಕ ಅಧಿಕಾರಿಗಳು ಕಾಲಾಕಾಲಕ್ಕೆ ನಿರ್ಮಾಣ ಮತ್ತು ಇತರ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡಿಸದೆ ಸಮಯಕ್ಕೆ ತಕ್ಕ ಊಟ ಉಪಚಾರ, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆಗೆ ಬೇಕಾಗುವ ಸವಲತ್ತುಗಳು ಇದೆಯಾ ಎಂದು ಪರಿಶೀಲಿಸಲು ಸೂಚಿಸಿದರು. ಸರಕಾರದ ಸವಲತ್ತುಗಳನ್ನು ನೈಜ ಕಾರ್ಮಿಕರಿಗೆ ಮಾತ್ರ ದೊರಕುವಂತೆ ನಿಗಾ ವಹಿಸಲು ತಿಳಿಸಿದರು. ರಾಜ್ಯದಲ್ಲಿ ಸುಮಾರು 134 ವಲಯಗಳ 2.5 ಕೋಟಿ ಕಾರ್ಮಿಕರಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸರಕಾರ ಕಾರ್ಮಿಕ ಹಿತಾಶಕ್ತಿಗೆ ಪೂರಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನಾರಾಯಣ ಕಿಳಂಗೋಡಿ, ರಿಯಾಸ್ ಉಳ್ಳಾಲ ಮಾಹಿತಿ ನೀಡಿದರು. ಕಾರ್ಮಿಕ ಅಧಿಕಾರಿ ಗಣಪತಿ ಹೆಗ್ಡೆ ಹಾಗೂ ಕಾರ್ಮಿಕ ಮುಖಂಡ ಶ್ರೀಧರ್ ಕಡೆಪಾಲ ಉಪಸ್ಥಿತರಿದ್ದರು. ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷರು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷತೆ ವಹಿಸಿದರು.




