ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಜಯಂತಿ….
ಪುತ್ತೂರು: ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಪರಿವರ್ತನೆ ನಡೆಸಿದ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಓರ್ವ ವ್ಯಕ್ತಿಯಲ್ಲ ಶಕ್ತಿ. ಆದರೆ ಇಂದು ರಾಜ್ಯದಲ್ಲಿ ಕೇವಲ ಜಾತಿಗೆ ಸೀಮಿತವಾಗಿ ಇವರ ಜಯಂತಿ ಆರಾಧನೆಗಳು ನಡೆಯುತ್ತಿದೆ. ಸರ್ವ ಜನಾಂಗದ ನೆಲೆಗಾಗಿ ತನ್ನ ಬದುಕಿನುದ್ದಕ್ಕೂ ಹೋರಾಡಿದ ಈ ಸಂತನನ್ನು ಸಮಷ್ಠಿ ಸಮಾಜ ಆರಾಧನೆ ಮಾಡುವ ಚಿಂತನೆ ಪ್ರಾರಂಭವಾಗಬೇಕಾಗಿದೆ ಎಂದು ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು.
ಅವರು ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಿನಿವಿಧಾನ ಸೌಧದ ತಾಲೂಕು ಸಭಾಂಗಣದಲ್ಲಿ ಶುಕ್ರವಾರ ನಡೆದ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಮರಣಾ ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ ಪುತ್ತೂರು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಮೂಢನಂಬಿಕೆ, ಜಾತಿಪದ್ಧತಿ, ಅಸಮಾನತೆಗಳ ವಿರುದ್ಧ ಹೋರಾಡಿದ ಸಂತ ನಾರಾಯಣಗುರು ಅವರ ಆಚಾರ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗಳು ಶ್ರೇಷ್ಟತೆಗೆ ತಲುಪುತ್ತವೆ. ನಾರಾಯಣಗುರುಗಳ ಸಂದೇಶ ಜನತೆಯ ಜೀವನದಲ್ಲಿ ಅಳವಡಿಕೆಯಾಗುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ತಹಶೀಲ್ದಾರ್ ಅನಂತಶಂಕರ, ಬಿಲ್ಲವ ಸಂಘದ ಉಪಾಧ್ಯಕ್ಷ ಡಾ.ಸದಾನಂದ ಕುಂದರ್ ಇದ್ದರು.
ಉಪತಹಶೀಲ್ದಾರ್ ರಾಮಣ್ಣ ನಾಯ್ಕ್ ಸ್ವಾಗತಿಸಿದರು. ಉಪತಹಶೀಲ್ದಾರ್ ದಯಾನಂದ ವಂದಿಸಿದರು. ತಾಲೂಕು ಕಚೇರಿ ಸಿಬ್ಬಂದಿ ನಾಗೇಶ್ ನಿರೂಪಿಸಿದರು.