ನೆನಪು…
ನೆನಪು…
ಲೋಕದ ಮಂದಿಯ ಹಸಿವನು ತಣಿಸಲು
ಭೂಮಿಯ ಸೆಲೆಯನು ಕಡೆದಾ ನೆನಪು
ಕೆಸರಲಿ ಆಡುತ ಬೀಳುತ ಏಳುತ
ಮಣ್ಣಿನ ನೀರನು ಕುಡಿದಾ ನೆನಪು
ದಿನಪನು ಮೂಡುವ ಮುನ್ನವೇ ಏಳುತ
ಕಾಯಕ ತೊಡಗುವ ರೈತನೇ ನಾಯಕ
ಹೊಲವನು ಹೂಳುತ ಹದವನು ಮಾಡುತ
ಬತ್ತವ ಬಿತ್ತುತ ನಡೆದಾ ನೆನಪು
ಮೊಳಕೆಯೊಡೆಯುತಾ ಜೀವವ ತಾಳಲು
ತರತರ ಹಸುರಿನ ಬಣ್ಣವೆ ಅಚ್ಚರಿ
ಹೆಚ್ಚಿನ ಫಸಲನು ಪಡೆಯಲು ಹಾಡುತ
ನೇಜಿಯ ನೆಡುತಾ ನುಡಿದಾ ನೆನಪು
ಪೈರದು ಮಾಗುತ ತೂಗಲು ಗಾಳಿಗೆ
ಕಣ್ಣಿಗೆ ತಂಪನು ತುಂಬದೆ ಇರುವುದೇ
ಕಟಾವು ಮಾಡುತ ಬೆಳೆಯನು ಸಾಗಿಸಿ
ಎತ್ತರೆತ್ತರಕೆ ಜಡಿದಾ ನೆನಪು
ಪೈರಿನ ರಾಶಿಗೆ ಪೂಜೆಯ ಮಾಡುತ
ಪ್ರಕೃತಿ ಮಾತೆಗೆ ಗೌರವ ತೋರಿರಿ
ಎಲ್ಲರ ಮೊಗದಲಿ ನಗುವನು ಕಾಣಲು
ವಿಪುಲಾನಂದವ ಪಡೆದಾ ನೆನಪು
ಡಾ. ವೀಣಾ ಎನ್ ಸುಳ್ಯ