ಉಡುಪಿಯಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ…
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನಕ್ಕೆ ಶನಿವಾರ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ತುಳು ಭಾಷಿಗರಾದ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆಯನ್ನು ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ ಸಂಸ್ಕಾರಗಳ ಉಳಿವಿನಲ್ಲಿ ಶ್ರಮಿಸುವುದು ಅತೀ ಅಗತ್ಯವಾಗಿದ್ದು, ಅದಕ್ಕಾಗಿ ಗಾಯತ್ರಿ ಮಂತ್ರವನ್ನು ನಿತ್ಯವೂ ಜಪಿಸಬೇಕು. ಜನಗಣಮನ ರಾಷ್ಟ್ರಗೀತೆಯಾದರೆ, ಗಾಯತ್ರಿ ಮಂತ್ರ ವಿಶ್ವಗೀತೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತರ ಸಮುದಾಯಗಳಿಗೆ ಹೋಲಿಸಿದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಮ್ಮ ಸಂಸ್ಕೃತಿ ಸಂಪ್ರದಾಯಗಳ ವಿಸ್ಮರಣೆ ಆಗುತ್ತಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಪುರೋಹಿತರ ಕೊರತೆ, ವಿವಾಹ ಸಮಸ್ಯೆ ಇತ್ಯಾದಿಗಳೂ ಇವೆ. ಅವುಗಳೆಲ್ಲದರ ನಿವಾರಣೆಗೆ ಈ ಸಮ್ಮೇಳನ ಆಯೋಜಿಸಲಾಗಿದೆ.
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಸಮ್ಮೇಳನ ಸಮಿತಿ ಪ್ರಮುಖರಾದ ರಾಮದಾಸ ಮಡ್ಮಣ್ಣಾಯ, ವೆಂಕಟರಮಣ ಪೋತಿ, ಡಾ. ಬಾಲಕೃಷ್ಣ ಮೂಡಂಬಡಿತ್ತಾಯ ಪುತ್ತೂರು, ರಾಮದಾಸ ಭಟ್ ಕಿದಿಯೂರು, ಶಿವಳ್ಳಿ ಬ್ರಾಹ್ಮಣರ ಪುರೋಹಿತರ ಸಂಘ ಅಧ್ಯಕ್ಷ ರಾಮದಾಸ ಭಟ್, ಮಂಜುನಾಥ ಉಪಾಧ್ಯ ಪರ್ಕಳ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮೊದಲಾದವರಿದ್ದರು.
ಸಮ್ಮೇಳನ ಪ್ರಧಾನ ಸಂಚಾಲಕ ಪ್ರೊ. ಎಂ. ಬಿ. ಪುರಾಣಿಕ್ ಸ್ವಾಗತಿಸಿದರು. ಪ್ರೊ. ಎಂ. ಎಲ್. ಸಾಮಗ ನಿರೂಪಿಸಿದರು. ಯು. ಕೆ. ಪುರಾಣಿಕ್ ಮೈಸೂರು ವಂದಿಸಿದರು. ಬಳಿಕ ವಿವಿಧ ಗೋಷ್ಟಿಗಳು ನಡೆದವು.