ನಾಸ್ತಿಕರನ್ನು ಆಸ್ತಿಕರನ್ನಾಗಿಸಬಲ್ಲ ವಿಶೇಷ ಶಕ್ತಿ ಭಜನೆಯಲ್ಲಿದೆ-ಕಣಿಯೂರು ಸ್ವಾಮೀಜಿ….
ಪುತ್ತೂರು: ಜನರನ್ನು ಧಾರ್ಮಿಕ ಪ್ರಜ್ಞೆಯಡೆಗೆ ಕೊಂಡೊಯ್ಯೂವ ವಿಶಿಷ್ಠ ಶಕ್ತಿ ಭಜನೆಯಲ್ಲಿದೆ. ಭಜನೆ ಕೇಳುತ್ತಾ ಕುಳಿತಲ್ಲಿಯೇ ತಮಗರಿವಿಲ್ಲದಂತೆ ನಮ್ಮನ್ನು ಭಕ್ತಿಯೆಡೆಗೆ ಸಾಗಿಸುತ್ತದೆ. ಭಜನೆ ಕೇಳುತ್ತಾ ಕುಳಿತಲ್ಲಯೇ ತಾಳ ಹಾಕಿಸುತ್ತದೆ. ನಾಸ್ತಿಕವಾಗಿರುವ ಮನಸ್ಸುಗಳನ್ನು ಆಸ್ತಿಕನನ್ನಾಗಿಸಬಲ್ಲ ವಿಶೇಷ ಶಕ್ತಿ ಭಜನೆಯಲ್ಲಿದೆ ಎಂದು ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿಯವರು ಹೇಳಿದರು.
ಖ್ಯಾತ ದಾಸ ಸಂಕೀರ್ಥನಕಾರ ರಾಮಕೃಷ್ಣ ಕಾಟುಕುಕ್ಕೆಯವರಲ್ಲಿ ತರಬೇತುಗೊಂಡ 100 ಶಿಷ್ಯ ಭಜನಾ ಮಂಡಳಿಗಳಿಂದ ಪುತ್ತೂರಿನ ಬಸ್ ನಿಲ್ದಾಣದ ಬಳಿಯಿರುವ ಅಮರ್ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಿಸಲಾದ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಕಛೇರಿಯನ್ನು ಭಾನುವಾರ ಉದ್ಘಾಟಸಿ ಅವರು ಮಾತನಾಡಿದರು.
ಭಜನೆಯು ಭಗವಂತನನ್ನು ಒಳಿಸಿಕೊಳ್ಳುವ ಸುಲಭ ವಿಧಾನ. ಭಜನೆಯ ಮೂಲಕ ಜನರನ್ನು ಭಕ್ತಿಯೆಡೆಗೆ ಸುಲಭವಾಗಿ ಆಕರ್ಷಿಸುವ ಶಕ್ತಿಯಿದೆ. ಅಲ್ಲದೆ ಜನರಲ್ಲಿ ಭಕ್ತಿಯ ಭಾವ ಜನರಲ್ಲಿ ಆಳವಾಗಿ ಬೇರೂರುವಂತೆ ಮಾಡುತ್ತದೆ. ಹರಿದು ಹಂಚಿಹೋಗಿರುವ ಸಮಾಜವನ್ನು ಒಂದು ಗೂಡಿಸುವ ವಿಶಿಷ್ಟವಾದ ಶಕ್ತಿಯದೆ. ಕುಣಿತ ಭಜನೆಯ ಮೂಲಕ ಸಂಗೀತದ ರಸದೌತನವನ್ನು ನೀಡುತ್ತದೆ ಎಂದರು. ಭಜನೆಯನ್ನು ಕ್ಯಾಸೆಟ್ ಮೂಲಕ ಕೇಳುವುದು ಮಾತ್ರವಲ್ಲ. ಸ್ವತಃ ಭಜನೆ ಹಾಡುವ ಮೂಲಕ ಅದರ ಸಾರವನ್ನು ಆಸ್ವಾಧಿಸಿದಾಗ ಅದರ ಮಹತ್ವದ ಅರಿವಾಗುತ್ತದೆ ಎಂದು ಹೇಳಿದ ಸ್ವಾಮಿಜಿಯವರು ಈಗಾಗಲೇ ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ರಾಮಕೃಷ್ಣ ಕಾಟುಕುಕ್ಕೆ ನೇತೃತ್ವದ ಭಜನಾ ಮಂಡಳಿಗಳು ರಾಜ್ಯದಾದ್ಯಂತ ವ್ಯಾಪಿಸಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಜನೆಯಿಂದ ವಿಭಜನೆಯಿಲ್ಲ. ಹಿಂದು ಸಮಾಜವನ್ನು ಒಂದು ಗೂಡಿಸುವಲ್ಲಿ ಭಜನೆಯು ಸಹಕಾರಿಯಾಗುವಂತ ಸುಲಭ ಸಾಧನ. ಧಾರ್ಮಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜದ ಪರಿವರ್ತನೆಯಲ್ಲಿ ಭಜನೆಯು ಪ್ರಮುಖ ಪಾತ್ರವಹಿಸುತ್ತದೆ. ನಿತ್ಯ ಭಜನಾ ಕಾರ್ಯದಲ್ಲಿ ತೊಡಗಿಸಿಕೊಂಡಾಗ ನೆಮ್ಮದಿಯ ಜೀವನ ಸಾಧ್ಯ. ಕಲಿಯುಗದ ದಾಸರೆನಿಸಿಕೊಂಡಿರುವ ರಾಮಕೃಷ್ಣ ಕಾಟುಕುಕ್ಕೆಯವರು ಭಜನಾ ಕ್ಷೇತ್ರದಲ್ಲಿ ಕ್ರಾಂತಿರೂಪದಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಚುತ್ತ ಮೂಡೆತ್ತಾಯ, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕಿ ಮಲ್ಲಿಕ ಪ್ರಸಾದ್, ನ್ಯಾಯವಾದಿ ಚಿದಾನಂದ ಬೈಲಾಡಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ಸದಸ್ಯೆ ಮಮತಾ ರಂಜನ್ ಮಾತನಾಡಿ ಶುಭಹಾರೈಸಿದರು.
ಭಜನಾ ಗುರು ರಾಮಕೃಷ್ಣ ಕಾಟುಕುಕ್ಕೆ ಸ್ವಾಗತಿಸಿದರು. ಜ್ಯೋತಿ ಆರ್ ನಾಯಕ್ ವಂದಿಸಿದರು.