ಡಾ| ಶಿವರಾಮ ಕಾರಂತ ಪ್ರೌಢ ಶಾಲೆಯಲ್ಲಿ ಉಚಿತ ಸೈಕಲ್ ವಿತರಣೆ…..
ಪುತ್ತೂರು: ನಗರದ ಡಾ| ಶಿವರಾಮ ಕಾರಂತ ಸರ್ಕಾರಿ ಪ್ರೌಢ ಶಾಲೆಯಲ್ಲಿ 8 ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲಾಗುವ ಉಚಿತ ಸೈಕಲ್‍ಗಳನ್ನು ಶಾಸಕ ಸಂಜೀವ ಮಠಂದೂರು ಅವರು ಶನಿವಾರ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತ ಅವರ ಹೆಸರಿನ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಹೆಮ್ಮೆ ಪಡಬೇಕು. ಈ ಶಾಲೆ ಇತರ ಶಾಲೆಗಳಿಗೆ ಮಾದರಿಯಾಗುವ ಫಲಿತಾಂಶವನ್ನು ಪಡೆಯಬೇಕು. ಸರಕಾರ ಬೇರೆ ಬೇರೆ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಿಸಿ ಸರಕಾರಿ ಶಾಲೆಗಳ ಪ್ರಗತಿಗೆ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ ವ್ಯವಸ್ಥೆಯನ್ನು ಎಸ್‍ಡಿಎಂಸಿ ಸದಸ್ಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ರಾಮದಾಸ್ ಉದ್ಘಾಟಿಸಿದರು ಹಾಗೂ ಕಂಪ್ಯೂಟರ್ ಕೊಠಡಿಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಸಭೆಯಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ನಳಿನಿ ವಂದಿಸಿದರು. ಶಿಕ್ಷಕ ಅಬ್ರಹಾಂ ಎಸ್.ಎ. ಕಾರ್ಯಕ್ರಮ ನಿರ್ವಹಿಸಿದರು.