ಅಳಿಕೆ ರಾಮಯ್ಯ ರೈ ಸಹಾಯ ನಿಧಿ ಪ್ರದಾನ – ಗೃಹ ಸನ್ಮಾನ…
ಪ್ರಯೋಗಶೀಲ ಬಣ್ಣದ ವೇಷಧಾರಿ ಶೆಟ್ಟಿಗಾರ್: ಡಾ. ಜೋಶಿ...

ಮಂಗಳೂರು: ‘ತೆಂಕು ತಿಟ್ಟಿನ ಬಣ್ಣದ ವೇಷಗಾರಿಕೆ ಯಕ್ಷಗಾನ ರಂಗದ ವಿಸ್ಮಯಗಳಲ್ಲೊಂದು. ಅನುಭವೀ ಹಿರಿಯ ಕಲಾವಿದರು ಈ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅದೇ ಪರಂಪರೆಯ ಜಾಡಿನಲ್ಲಿ ಹೊಸ ಆವಿಷ್ಕಾರದೊಂದಿಗೆ ಜನಮನ ಗೆದ್ದ ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್. ಅವರು ಓರ್ವ ಪ್ರಯೋಗಶೀಲ ಬಣ್ಣದ ವೇಷಧಾರಿ’ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ.
ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರಸಿದ್ಧ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಗೃಹ ಸಮ್ಮಾನದೊಂದಿಗೆ ಅಳಿಕೆ ರಾಮಯ್ಯ ರೈ ಯಕ್ಷ ಸಹಾಯನಿಧಿ ಪ್ರದಾನ ಮಾಡಿದ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಮುಖ್ಯ ಸಲಹೆಗಾರರಾಗಿ ಅವರು ಮಾತನಾಡಿದರು. ಇನ್ನೋರ್ವ ಸಲಹೆಗಾರ ಹಾಗೂ ಸದಾಶಿವ ಶೆಟ್ಟಿಗಾರ್ ಅವರ ಒಡನಾಡಿ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು.
ನೆರವಿಗಾಗಿ ಮನವಿ:
ಆಯ್ಕೆ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಬಣ್ಣದ ಮಾಲಿಂಗಜ್ಜನ ಗರಡಿಯಲ್ಲಿ ಪಳಗಿದ ಸದಾಶಿವ ಶೆಟ್ಟಿಗಾರ್ ಪಾರಂಪರಿಕ ಶೈಲಿ, ಹೊಸತನದ ಮೆರುಗು ಮತ್ತು ಪ್ರಬುದ್ಧ ಮಾತುಗಾರಿಕೆಯ ಮೂಲಕ ಭರವಸೆಯ ಬಣ್ಣದ ವೇಷಧಾರಿಯಾಗಿ ಬೆಳೆದು ಬಂದವರು. ಗಜೇಂದ್ರ ಮೋಕ್ಷದ ಮಕರ, ರಾಮ ಕಾರುಣ್ಯದ ಕಾಕಾಸುರ ಅವರದೇ ಪರಿಕಲ್ಪನೆಯ ಬಣ್ಣದ ವಿಶಿಷ್ಟ ಮಾದರಿಗಳು. ಪ್ರಸ್ತುತ 60ರ ಹರೆಯದಲ್ಲಿ ಗಂಭೀರ ಕಾಯಿಲೆಗೆ ತುತ್ತಾಗಿ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಅವರಿಗೆ ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಹಣ ಬೇಕಾಗಿದೆ. ಕಲಾಭಿಮಾನಿಗಳು ಉದಾರವಾಗಿ ಸ್ಪಂದಿಸಿದರೆ ಮಾತ್ರ ಯಕ್ಷಗಾನ ರಂಗದಲ್ಲಿ ಮುಂದೆಯೂ ಅವರು ದುಡಿಯಬಲ್ಲರು. ನೆರವು ನೀಡುವವರು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಬಹುದು. (ಗೂಗಲ್ ಪೇ ನಂ.9741025189)’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅಳಿಕೆ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ರೂ.20,000/- ಸಹಾಯ ನಿಧಿಯನ್ನು ಅರ್ಪಿಸಿ, ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಎತ್ತರದ ವ್ಯಕ್ತಿ ಅಳಿಕೆ:
ಸದಾಶಿವ ಶೆಟ್ಟಿಗಾರ್ ಮತ್ತು ಕಲಾವತಿ ದಂಪತಿಗಳನ್ನು ಸಿದ್ಧಕಟ್ಟೆಯ ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಸದಾಶಿವ ಶೆಟ್ಟಿಗಾರ್ ‘ಕೀರ್ತಿ ಶೇಷ ಅಳಿಕೆಯವರದು ತುಂಬಾ ಎತ್ತರದ ವ್ಯಕ್ತಿತ್ವ. ಅವರ ಜೊತೆಯಲ್ಲಿ ಒಂದು ವೇಷ ಮಾಡಿದ್ದೇನೆ. ಅವರ ಹೆಸರಿನ ಗೌರವ ಸಿಕ್ಕಿರುವುದಕ್ಕೆ ಧನ್ಯತೆಯ ಭಾವ ಮೂಡಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.
ಕವಿ – ಸಂಘಟಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಫಲಕ ವಾಚಿಸಿದರು. ಟ್ರಸ್ಟ್ ಸದಸ್ಯರಾದ ಮಹಾಬಲ ಶೆಟ್ಟಿ ಬಜನಿ ಗುತ್ತು, ಅಶೋಕ್ ಶೆಟ್ಟಿ ದರ್ಬೆ ಮತ್ತು ಶೆಟ್ಟಿಗಾರ್ ಅವರ ಮನೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.