ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ NBA ಮಾನ್ಯತೆ……
ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (National Board of Accreditation ) ಮಾನ್ಯತೆ ಸಿಕ್ಕಿರುತ್ತದೆ.
NBA ಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (AICTE) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜತೆಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
AICTE ಯು ನಿಗದಿಪಡಿಸಿದ ರೀತಿಯಲ್ಲಿ ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳು, ಪಾಠ ಪ್ರವಚನಗಳು, ಮೂಲಭೂತ ಸೌಕರ್ಯಗಳು, ಪ್ರಯೋಗಾಲಯಗಳು, ಕ್ರೀಡಾ ಸವಲತ್ತುಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ಯಾಂಪಸ್ ನೇಮಕಾತಿ, ಕ್ಯಾಂಟೀನ್ ಸೌಲಭ್ಯ, ಹಾಸ್ಟೆಲ್ ಇವೇ ಮುಂತಾದ ಹತ್ತು ಹಲವು ಸೌಲಭ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಈ ಮಾನ್ಯತೆಯನ್ನು ನೀಡಲಾಗಿದೆ.
ಐದು ಮಂದಿ ತಜ್ಞರನ್ನೊಳಗೊಂಡ NBA ತಂಡವು ಸೆಪ್ಟೆಂಬರ್ 20 ರಿಂದ ಮೂರು ದಿನಗಳ ಕಾಲ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮೂರು ವರ್ಷಗಳ ಅವಧಿಗೆ ಈ ಮನ್ಯತೆಯನ್ನು ನೀಡಿದೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.