ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಕನ್ನಡ ರಾಜ್ಯೋತ್ಸವ ಆಚರಣೆ…

ಪುತ್ತೂರು: ಇತಿಹಾಸದ ಪುಟಗಳತ್ತ ಇಣುಕಿ ನೋಡಿದಾಗ 1903 ರಲ್ಲಿ ಆರಂಭವಾದ ಕನ್ನಡ ಏಕೀಕರಣ ಚಳುವಳಿಯು ಮುಂದಿನ ದಿನಗಳಲ್ಲಿ ತೀವ್ರಗೊಂಡು 1956ರ ನವೆಂಬರ್ ಒಂದರಂದು ಮೈಸೂರು ರಾಜ್ಯ ಉದಯವಾಯಿತು. 1973 ನವೆಂಬರ್ ಒಂದರಂದು ಕರ್ನಾಟಕ ರಾಜ್ಯವಾಗಿ ನಾಮಕರಣಗೊಂಡಿತು. ಇಲ್ಲಿನ ಸುಂದರವಾದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಎಸ್.ಕೆ.ಎಫ್ ಇಂಡಿಯಾ ಲಿಮಿಟೆಡ್ ಇಲ್ಲಿನ ಅಧಿಕಾರಿ ಹಾಗೂ ಸಾಹಿತಿ ಹರಿನರಸಿಂಹ ಉಪಾಧ್ಯಾಯ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನ.5 ರಂದು ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಯಾವುದೇ ಭಾಷೆಯನ್ನಾಗಲಿ ನಿರಂತರವಾಗಿ ಬಳಸಿದರೆ ಮಾತ್ರ ಅದರ ಉಳಿವು ಸಾಧ್ಯವಾಗುತ್ತದೆ. ಹಾಗಾಗಿ ಕನ್ನಡ ಭಾಷೆಯನ್ನು ಬಳಸುವಲ್ಲಿ ಮತ್ತು ಉಳಿಸುವಲ್ಲಿ ನಾವು ಶಕ್ತಿವಂತರಾಗಬೇಕು ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯಗುರು ಆಚಾರ್ಯ ಹಿಂದಾರು ಮಾತನಾಡಿ ತಾನು ಕಲಿತ ಕಾಲೇಜಿನಲ್ಲಿ ವೇದಿಕೆಯನ್ನು ಹಂಚಿಕೊಳ್ಳುವುದು ಮತ್ತು ಗೌರವವನ್ನು ಸ್ವೀಕರಿಸುವುದು ಹೆಮ್ಮೆಯ ವಿಚಾರ. ಭಾಷಾಭಿಮಾನ ಒಂದು ದಿನಕ್ಕೆ ಸೀಮಿತವಾಗಬಾರದು ನಿರಂತರವಾಗಿ ಬಳಸುತ್ತಾ ಇನ್ನಷ್ಟು ಎತ್ತಕ್ಕೇರಿಸಬೇಕು ಎಂದರು.
ಕಾಲೇಜಿನ ಪ್ರಾಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ, ಬರೆಯುವುದನ್ನು ಓದುವ ಮತ್ತು ಓದುವಂತೆಯೇ ಬರೆಯುವ, ಯಾವುದೇ ನಿಶ್ಯಬ್ದ ಅಕ್ಷರವಿಲ್ಲದ ಶಬ್ದಗಳನ್ನು ಹೊಂದಿರುವ ಸುಂದರ ಭಾಷೆ ಕನ್ನಡ. ಇದನ್ನು ನಿರಂತರವಾಗಿ ಓದಬೇಕು, ಬರೆಯಬೇಕು, ಬಳಸಬೇಕು ಮತ್ತು ಬೆಳೆಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಮಾತನಾಡಿ ಪ್ರತಿಯೊಬ್ಬನಿಗೂ ಮಾತೃ ಭಾಷೆಯ ಮೇಲೆ ಅಪಾರ ಅಭಿಮಾನವಿರಬೇಕು. ಆಗ ಆಂತರ್ಯದಿಂದಲೇ ಉತ್ತಮ ಭಾವನೆಗಳು ಮೂಡುತ್ತವೆ. ಆಚಾರ ವಿಚಾರಗಳು, ನಡೆ-ನುಡಿಗಳು ಉತ್ತಮಗೊಂಡು ಪರಿಪೂರ್ಣತೆಯನ್ನು ಸಾಧಿಸಲು ಸಹಕಾರಿಯಾಗುತ್ತದೆ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯಗುರು ಆಚಾರ್ಯ ಹಿಂದಾರು ಹಾಗೂ ಮುಖ್ಯ ಅತಿಥಿಗಳಾದ ಹರಿನರಸಿಂಹ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು.
ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಲಹರಿ ಕನ್ನಡ ಸಂಘವು ಹೊರತಂದಿರುವ ಸಂಪಾದಿತ ಕೃತಿ ಅಕ್ಷರಧಾರೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಲಹರಿ ಕನ್ನಡ ಸಂಘದ ನೂತನ ಲಾಂಛನವನ್ನು ಸುಬ್ರಮಣ್ಯ ಭಟ್ ಟಿ.ಎಸ್ ಅನಾವರಣಗೊಳಿಸಿದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್ ಟಿ.ಎಸ್, ಐಎಸ್‍ಟಿಇ ಸಂಯೋಜಕ ಡಾ.ಮನುಜೇಶ್.ಬಿ.ಜೆ, ಲಹರಿ ಕನ್ನಡ ಸಂಘದ ಸಂಯೋಜಕ ಪ್ರೊ.ನವೀನ್.ಸಿ ಮತ್ತು ವಿದ್ಯಾರ್ಥಿ ಸಂಯೋಜಕ ಅನೀಶ್.ಎಸ್.ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೊ.ನವೀನ್.ಸಿ ಪ್ರಸ್ತಾವನೆಗೈದರು. ಸುಪ್ರೀತ್ ಸ್ವಾಗತಿಸಿ ಕೃತಿ.ಡಿ ವಂದಿಸಿದರು. ಭುವನೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.

kannada rajyothsava (3)

kannada rajyothsava (1)

kannada rajyothsava (2)

kannada rajyothsava (4)

whatsapp image 2024 11 05 at 3.04.08 pm

 

Sponsors

Related Articles

Back to top button