ಸಂಸ್ಕಾರಯುತ ಬದುಕು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ….
ಬಂಟ್ವಾಳ : ಸಂಸ್ಕಾರಯುತ ಬದುಕು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ. ಧರ್ಮದ ಮೇಲಿನ ನಂಬಿಕೆಯಿಂದ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಸತ್ಯದ ಮೂಲಕ ನೆಮ್ಮದಿಯಿಂದ ಬದುಕಬಹುದು. ಸಮಾಜ ಕಟ್ಟುವವರು ಮೊದಲು ತ್ಯಾಗಕ್ಕೆ ಸಿದ್ಧರಾಗಬೇಕು. ಹೊಣೆಗಾರಿಕೆಯಿಂದ ಕೆಲಸ ಮಾಡಲು ಇದರಿಂದ ಸಾಧ್ಯ ಎಂದು ಧರ್ಮಸ್ಥಳ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಜ. 5ರಂದು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮತ್ತು ಯುವವಾಹಿನಿ ಮಾಣಿ ಘಟಕ ಬೆಳ್ಳಿ ಹಬ್ಬ ಸಮಾರಂಭ ಪ್ರತಿಭಾ ಪುರಸ್ಕಾರ, ಸಮ್ಮಾನ, ಕ್ರೀಡಾಕೂಟ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಬೊಳ್ಳಿ ಮಾಣಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಆಶೀರ್ವಾದ ನೀಡಿದರು.
ಶ್ರೀಕ್ಷೇತ್ರ ಕುದ್ರೋಳಿಯ ಎಚ್. ಎಸ್. ಸಾಯಿರಾಮ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ನಾರಾಯಣ ಸಾಲ್ಯಾನ್ ಅನಂತಾಡಿ ಸಭಾಧ್ಯಕ್ಷತೆ ವಹಿಸಿದ್ದರು.
ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಕೋಟಿ ಚೆನ್ನಯರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ. ಬಿಲ್ಲವರು ವಿದ್ಯೆ ಮತ್ತು ಅಧ್ಯಯನ ಶೀಲತೆಯಿಂದ ಪ್ರಗತಿ ಹೊಂದಬಹುದು. ಸತ್ಯ ಮಾರ್ಗದಲ್ಲಿ ನಡೆದಾಗ ಸಮಾಜ ಬೆಂಬಲಿಸುತ್ತದೆ. ದುಡಿಮೆ ಸಾಧನೆಯಿಂದ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯ. ಜಾತಿ ಪ್ರಭಾವದಿಂದ ಮೇಲೆರಲು ಸಾಧ್ಯವಿಲ್ಲ ಎಂದರು.ಯುವಕರು ಸಂಕುಚಿತ ಮನೋಭಾವದಿಂದ ಹೊರಬಂದು ವಿಶಾಲದೃಷ್ಟಿಯಿಂದ ಸಂಘಟನೆಯನ್ನು ಬಲಪಡಿಸಬೇಕು. ಸ್ವಾಭಿಮಾನ, ದುಡಿದು ಪಡೆಯುವ ಮೂಲಕ ಸಮಾಜದಲ್ಲಿ ಬೆರೆತು ಬಾಳಬೇಕು ಎಂದು ಕರೆ ನೀಡಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಹೋದಾಗ ನಾವು ವ್ಯವಸ್ಥೆಯಲ್ಲಿ ಮೇಲೇರಲು ಸಾಧ್ಯ. ಮುಜರಾಯಿ ಇಲಾಖೆಯಿಂದ ಕೇವಲ ದೇವಸ್ಥಾನ ಮಾತ್ರವಲ್ಲ, ದೈವಸ್ಥಾನ, ಭಜನಾ ಮಂದಿರಗಳಿಗೂ ಅನುದಾನ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಚಿತ್ರನಟ ರಾಜ್ ಕುಮಾರ್ ಮೊದಲಾದವರು ತಮಗೆ ಸಿಕ್ಕಿದ ಅವಕಾಶ ಬಳಸಿ ತಮ್ಮದೇ ರೀತಿಯಲ್ಲಿ ಸಮಾಜ ಸೇವೆ ಮಾಡಿದ್ದಾರೆ. ಅವರು ನಮಗೆ ಆದರ್ಶರಾಗಬೇಕು. ಯುವ ನಾಯಕತ್ವವನ್ನು ಬೆಳೆಸುವಲ್ಲಿ ಸಂಘಟನೆಗಳು ಪ್ರೋತ್ಸಾಹ ನೀಡಬೇಕು ಎಂದರು.
ಬಂಟ್ವಾಳ ಬಿಲ್ಲವರ ಸಮಾಜ ಸೇವಾ ಸಂಘ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಉಪನ್ಯಾಸಕ ಉಮ್ಮಪ್ಪ ಪೂಜಾರಿ, ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ಅಧ್ಯಕ್ಷ ಜಯಂತ ನಡುಬೈಲು, ಯುವವಾಹಿನಿ ಮಾಣಿ ಘಟಕ ಅಧ್ಯಕ್ಷ ರಮೇಶ್ ಪೂಜಾರಿ ಮುಜಲ, , ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪ್ರಮುಖರಾದ ಶೋಭಾಕೇಶವ ಉಪಸ್ಥಿತರಿದ್ದರು.
ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಯುವವಾಹಿನಿ ಸಾಧಕ ಪ್ರಶಸ್ತಿ ಪುರಸ್ಕೃತ ಪ್ರಶಾಂತ ಅನಂತಾಡಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ತಿವೇಣಿ ರಮೇಶ್ ಪೂಜಾರಿ ಮುಜಲ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು.
ಬೆಳಗ್ಗೆ ನಡೆದ ಗುರುಪೂಜೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಸಾಯಿಶಾಂತಿ ಮಣಿನಾಲ್ಕೂರು ಮತ್ತು ಸುರೇಶ್ ಶಾಂತಿ ಮಿತ್ತೂರು ನಡೆಸಿಕೊಟ್ಟರು.
ಸಮಿತಿ ಗೌರವಾಧ್ಯಕ್ಷ ಈಶ್ವರ ಪೂಜಾರಿ ಹಿರ್ತಡ್ಕ ಸ್ವಾಗತಿಸಿ, ಸೋಮಪ್ಪ ಪೂಜಾರಿ ಮಾದೇಲು ವಂದಿಸಿದರು. ರಾಜೇಶ್ ಎಸ್. ಬಲ್ಯ ಮತ್ತು ದಿನಕರ ಅಂಚನ್ ಬಲ್ಯ ಕಾರ್ಯಕ್ರಮ ನಿರ್ವಹಿಸಿದರು.