‘ಏರ್ಯದ ಆಳ್ವರು ಮಾಸದ ನೆನಪು’ ಕಾರ್ಯಕ್ರಮ…..
ಬಂಟ್ವಾಳ:ಬದುಕಿನುದ್ದಕ್ಕೂ ನೇರ ನಡೆನುಡಿಯಿಂದ ಆದರ್ಶ ವ್ಯಕ್ತಿಯಾಗಿದ್ದ ಏರ್ಯರು ಸಾಮರಸ್ಯದ ಸಮಾಜ ನಿರ್ಮಾಣವಾಗಬೇಕೆಂದು ಬಯಸಿದ್ದರು. ಎಲ್ಲಾ ವರ್ಗದ ಜನರೊಂದಿಗೆ ಸ್ನೇಹ ಸೇತುವಾಗಿ ಒಳ್ಳೆಯದನ್ನು ಕಂಡಾಗ ಹೊಗಳುವ ಮೂಲಕ ಹೃದಯವಂತರಾಗಿ ಎಲ್ಲರ ಪ್ರೀತಿ ಗಳಿಸಿದ್ದರು ಎಂದು ಕಾರ್ಕಳ ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಪ್ರೊ. ಎಮ್. ರಾಮಚಂದ್ರ ಹೇಳಿದರು.
ಅವರು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರತಿಷ್ಠಾನ ಸಹಯೋಗದಲ್ಲಿ ಏರ್ಪಡಿಸಲಾದ ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ನುಡಿನಮನ ‘ಏರ್ಯದ ಆಳ್ವರು ಮಾಸದ ನೆನಪು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಾಂಧೀಜಿ ಮತ್ತು ರಾಮ ರಾಜ್ಯದ ಪರಿಕಲ್ಪನೆಯ ಬಗ್ಗೆ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ವಿಶೇಷ ಉಪನ್ಯಾಸ ನೀಡಿದರು. ಏರ್ಯರು ಗಾಂಧೀಜಿಯ ವ್ಯಕ್ತಿತ್ವನ್ನು ತನ್ನಲ್ಲಿ ಅಳವಡಿಸಿಕೊಂಡು ಸರ್ವಜನರ ಏಳಿಗೆಯನ್ನು ಬಯಸಿದ್ದರು. ಪರಿಸರದ ಬಗ್ಗೆ ಕಾಳಜಿಹೊಂದಿದ್ದ ಅವರು ಗಾಂಧಿ ತತ್ವವನ್ನು ಅಳವಡಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.
ಮೊಡಂಕಾಪು ಚರ್ಚ್ ಧರ್ಮಗುರು ವಲೇರಿಯನ್ ಎಸ್. ಡಿ’ಸೋಜ, ಬೆಂಗಳೂರಿನ ಉದ್ಯಮಿ ಏರ್ಯ ಬಾಲಕೃಷ್ಣ ಹೆಗ್ಡೆ ಮುಖ್ಯ ಅತಿಥಿಗಳಾಗಿ ಮಾತನಾಡಿ ಏರ್ಯರ ಕುಟುಂಬ ಹಾಗೂ ಸಾಮಾಜಿಕ ಬದುಕಿನ ಚಿತ್ರಣ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಗಮಕಿ ಗಣಪತಿ ಪದ್ಯಾಣ ಏರ್ಯರ ಆಯ್ದ ಕವನಗಳ ಗಾಯನ ಮಾಡಿ ನುಡಿ ನಮನ ಸಲ್ಲಿಸಿದರು. ಪ್ರೊ. ಉದ್ಯಾವರ ಮಾಧವ ಆಚಾರ್ಯ ನಿರ್ದೇಶನದಲ್ಲಿ ಉಡುಪಿ ವಿದುಷಿ ಭ್ರಮರಿ ಶಿವಪ್ರಕಾಶ್ ಇವರು ಶ್ರೀರಾಮಾವತಾರದ ಮಂಗಲ ಮುಕ್ತಾಯವನ್ನು ಅಭಿವ್ಯಕ್ತಿಸುವ ಏಕ ವ್ಯಕ್ತಿ ನೃತ್ಯ ನಾಟಕ ‘ಕೋದಂಡ ಮನೆ ‘ ಅಭಿನಯಿಸಿ ಪ್ರಸ್ತುತ ಪಡಿಸಿದರು.
ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಮೋಹನ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿದರು. ಉಪನ್ಯಾಸಕಿ ಡಾ. ನಾಗವೇಣಿ ಮಂಚಿ ವಂದಿಸಿದರು. ನಿವೃತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ನಿರೂಪಿಸಿದರು.