ಪ್ಲಾಸ್ಟಿಕ್ ಕೈಚೀಲಕ್ಕೆ ಪರ್ಯಾಯ ವ್ಯವಸ್ಥೆಯಾಗುವ ತನಕ ರಿಯಾಯಿತಿ ನೀಡಿ-ವರ್ತಕ ಸಂಘದಿಂದ ನಗರ ಸಭಾ ಪೌರಾಯುಕ್ತರಿಗೆ ಮನವಿ…..
ಪುತ್ತೂರು: ನಗರದಲ್ಲಿ ಪ್ಲಾಸ್ಟಿಕ್ ಕೈ ಚೀಲಕ್ಕೆ ಪರ್ಯಾಯ ವ್ಯವಸ್ಥೆ ಬರುವ ತನಕ ಪ್ಲಾಸ್ಟಿಕ್ ಬಗ್ಗೆ ವರ್ತಕರಿಗೆ ಯಾವುದೇ ದಂಡ ಹಾಕದೇ ರಿಯಾಯಿತಿ ನೀಡುವಂತೆ ಆಗ್ರಹಿಸಿ ಪುತ್ತೂರಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಬುಧವಾರ ನಗರ ಸಭಾ ಪೌರಾಯುಕ್ತರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಪ್ಲಾಸ್ಟಿಕ್ ಬಳಕೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿರುವುದನ್ನು ವರ್ತಕ ಸಂಘ ಸ್ವಾಗತಿಸುತ್ತದೆ. ಆದರೆ ಪ್ಲಾಸ್ಟಿಕ್ ಚೀಲ ಬಳಕೆಗೆ ಪರ್ಯಾಯ ವ್ಯವಸ್ಥೆ ಇನ್ನೂ ಬಂದಿಲ್ಲ. ಪರ್ಯಾಯ ವ್ಯವಸ್ಥೆಯಾಗುವ ತನಕ ವರ್ತಕರಿಗೆ ಏಕಾಏಕಿ ದಂಡ ವಿಧಿಸುವುದು ಸರಿಯಲ್ಲ. ಇದರಿಂದ ಸಣ್ಣ ಪುಟ್ಟ ವರ್ತಕರಿಗೆ ತೀವ್ರ ತೊಂದರೆ ಉಂಟಾಗುತ್ತದೆ. ಪ್ಲಾಸ್ಟಿಕ್ ಚೀಲ ಬಳಕೆಗೆ ಪರ್ಯಾಯ ವ್ಯವಸ್ಥೆ ಒದಗಿಸುವ ತನಕ ರಿಯಾಯಿತಿ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೇಮ್ಸ್ ಜೆ.ಮಾಡ್ತಾ, ಕಾರ್ಯದರ್ಶಿ ಮಹಮ್ಮದ್ ರಫೀಕ್, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಕೇಶವ ಪೈ, ಉಲ್ಲಾಸ್ ಪೈ ಸದಸ್ಯರಾದ ಇಸುಬು ಹಾಗೂ ಎಲ್.ಟಿ ಫಾರೂಕ್ ಉಪಸ್ಥಿತರಿದ್ದರು.