ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ರಾಮ ಭಟ್ ಅವರಿಗೆ ನುಡಿನಮನ…

ಪುತ್ತೂರು: ಸರಳ ಸಜ್ಜನ, ತ್ಯಾಗ ಜೀವಿ, ವಿವೇಕಾನಂದ ಸಂಸ್ಥೆಗಳ ಸ್ಥಾಪನೆಗೆ ಮತ್ತು ಬೆಳವಣಿಗೆಗೆ ಬೆನ್ನೆಲುಬಾಗಿದ್ದ ಹಿರಿಯ ಮುತ್ಸದ್ದಿ, ಬಿಜೆಪಿಯ ಭೀಷ್ಮ ಎಂದೇ ಪ್ರಖ್ಯಾತಿಯಾಗಿದ್ದ ಶ್ರೀ ರಾಮ ಭಟ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು.
ಅವರು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ರಾಮ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಮಾತನಾಡಿದರು. ಪುತ್ತೂರಿನ ಶಾಸಕರಾಗಿದ್ದ ಅವರು ಎಲ್ಲರಿಗೂ ಬೇಕಾದವರಾಗಿದ್ದು, ಅಜಾತ ಶತ್ರು ಎನಿಸಿಕೊಂಡಿದ್ದರು. ತತ್ವ ಮತ್ತು ಸಿದ್ದಾಂತದ ಉಳಿವಿಗಾಗಿ ಹಗಲಿರುಳೂ ಶ್ರಮಿಸುತ್ತಿದ್ದರು. ಅವರ ಆತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ, ಸ್ವಂತಕ್ಕೋಸ್ಕರ ಏನನ್ನೂ ಬಯಸದ ಸರಳಜೀವಿ ರಾಮ ಭಟ್ಟರು ಯಾರಿಗೂ ನೋವಾಗದಂತೆ ಬಾಳಿದ್ದರು. ಸಮಾಜದ ವಿವಿಧ ಸ್ತರಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅವರ ಯೋಚನೆಗಳು ಮತ್ತು ಯೋಜನೆಗಳು ಅನುಕರಣೀಯವಾಗಿದೆ. ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಅನೇಕ ನಾಯಕರನ್ನು ಬೆಳೆಸಿದ ಕೀರ್ತಿ ಅವರದ್ದು. ಅಂತಹ ಮಹಾನ್ ನಾಯಕನ ಆತ್ಮವು ಭಗವಂತನಲ್ಲಿ ಲೀನವಾಗಲಿ ಎಂದರು.
ಪ್ರಾಂಶುಪಾಲ ಡಾ. ಮಹೇಶ್‍ಪ್ರಸನ್ನ.ಕೆ ಮಾತನಾಡಿ ರಾಮ ಭಟ್ ಅವರ ಆದರ್ಶಗಳು ನಮಗೆ ದಾರಿದೀಪವಾಗಿದೆ. ರಾಜಕಾರಣಿಯಾಗಿದ್ದರೂ ಇತರರಿಗೆ ಮಾದರಿಯಾಗುವಂತೆ ಬದುಕಿದ ಅವರ ಆತ್ಮಕ್ಕೆ ಚಿರಸಾಯುಜ್ಯ ಪ್ರಾಪ್ತಿಯಾಗಲಿ ಎಂದರು.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆಯನ್ನು ನಡೆಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕಾರಾದ ರವಿಕೃಷ್ಣ.ಡಿ.ಕಲ್ಲಾಜೆ, ಸಂತೋಷ್ ಕುತ್ತಮೊಟ್ಟೆ, ಸತ್ಯನಾರಾಯಣ.ಬಿ, ಡಾ.ಯಶೋಧಾ ರಾಮಚಂದ್ರ, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Sponsors

Related Articles

Back to top button