ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಿಶ್ವ ಮಣ್ಣಿನ ದಿನಾಚರಣೆ…

ಪುತ್ತೂರು: ಮಣ್ಣು ಪ್ರಕೃತಿಯ ಒಂದು ಅಮೂಲ್ಯ ಕೊಡುಗೆ. ಜಗತ್ತಿನ ಸಕಲ ಜೀವರಾಶಿಗಳಿಗೆ ಅಧಾರವೇ ಮಣ್ಣು. ಇದು ಒಮ್ಮೆ ನಾಶವಾದರೆ ಹಿಂತಿರುಗಿ ಪಡೆಯಲಾಗದು ಎಂದು ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡಿನ ಹಿರಿಯ ವಿಜ್ಞಾನಿ ಡಾ.ಸೆಲ್ವಮಣಿ.ವಿ ಹೇಳಿದರು.
ಅವರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಐಎಸ್‍ಟಿಇ ನವದೆಹಲಿ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀರಾಮ ಸಭಾ ಭವನದಲ್ಲಿ ನಡೆದ ವಿಶ್ವ ಮಣ್ಣಿನ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು..
ಜಗತ್ತಿನ ಶೇ.95 ರಷ್ಟು ಆಹಾರ ಪದಾರ್ಥಗಳು ಮಣ್ಣಿನಿಂದಲೇ ದೊರೆಯುತ್ತದೆ. ಈಗಾಗಲೇ ಶೇ.33 ರಷ್ಟು ಭಾಗ ಮಣ್ಣು ಫಲವತ್ತತೆಯನ್ನು ಕಳೆದುಕೊಂಡಿರುವುದರಿಂದ ಉತ್ಪಾದಕತೆಯಲ್ಲಿ ಅಪಾರ ಇಳಿಕೆಯಾಗಿದೆ. ರಾಸಾಯನಿಕಗಳ ಅತಿಯಾದ ಮತ್ತು ಅಸಮತೋಲನದ ಬಳಕೆಯಿಂದಾಗಿ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಲಕ್ಷಣಗಳು ನಾಶವಾಗುತ್ತಿವೆ ಎಂದರು. ಪ್ಲಾಸ್ಟಿಕ್‍ನಂತಹ ಪರಿಸರ ನಾಶ ಮಾಡುವ ವಸ್ತುಗಳನ್ನು ಬಳಸದೇ ಮಣ್ಣಿನ ರಕ್ಷಣೆಯನ್ನು ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ.ಬಿ ಮಾತನಾಡಿ ಜಗತ್ತು ಅಭಿವೃದ್ಧಿಯನ್ನು ಬಯಸುತ್ತದೆ. ಅಭಿವೃದ್ಧಿಯ ಸಂದರ್ಭದಲ್ಲ್ಲಿ ಸಾಕಷ್ಟು ಪರಿಸರ ನಾಶವಾಗುತ್ತದೆ. ಪರಿಸರ ಮತ್ತು ಅಭಿವೃದ್ಧಿಯಲ್ಲಿ ಸಮತೋಲನವನ್ನು ಸಾಧಿಸದೇ ಹೋದರೆ ಪ್ರಕೃತಿಯು ಮುನಿಯುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲದ ಮಳೆ, ಸಾಂಕ್ರಾಮಿಕ ರೋಗಗಳು ಪರಿಸರ ನಾಶದ ಪರಿಣಾಮ ಎಂದರು.
ಮಣ್ಣಿನ ದಿನದ ನೆನಪಿಗಾಗಿ ಅತಿಥಿಗಳು ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಟ್ಟರು. ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಡಾ.ಸೌಮ್ಯ.ಎನ್.ಜೆ ಮಣ್ಣಿನ ದಿನದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಆನಂದ್.ವಿ.ಆರ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಪ್ರೊ. ಜಯಪ್ರಕಾಶ್ ಭಟ್.ಡಿ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರಾವಣಿ.ಸಿ ಮತ್ತು ಸ್ಪೂರ್ಥಿ.ಎಮ್.ಎಸ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button