ದ.15 ರಂದು ಕಲ್ಲಡ್ಕದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ : ಅಯೋಧ್ಯಾ ಹೋರಾಟದ ಸನ್ನಿವೇಶಗಳ ಚಿತ್ರಣ….
ಬಂಟ್ವಾಳ: ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ದ.15 ರಂದು ಸಂಜೆ 6 ಗಂಟೆಯಿಂದ ವಿವಿಧ ಸಾಂಸ್ಕøತಿಕ ಹಾಗೂ ಶಾರೀರಿಕ ಪ್ರದರ್ಶನಗಳೊಂದಿಗೆ ಆಕರ್ಷಕವಾಗಿ ನಡೆಯಲಿದೆ.
ವಿದ್ಯಾಕೇಂದ್ರ ಮೈದಾನದಲ್ಲಿ 3399 ವಿದ್ಯಾರ್ಥಿಗಳು ನಿರಂತರ 3 ಗಂಟೆಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ ನೀಡಲಿದ್ದಾರೆ. ಶಿಶು ಮಂದಿರದಿಂದ ಕಾಲೇಜು ವಿದ್ಯಾರ್ಥಿಗಳವರೆಗಿನ ಸಾಮೂಹಿವಾಗಿ ಮಾಡುವ ಪ್ರದರ್ಶನ ರಾಷ್ಟ್ರಮಟ್ಟದಲ್ಲಿಯೇ ವಿಶಿಷ್ಟವಾಗಿದೆ. ಸಹಸ್ರಾರು ಮಂದಿ ಪ್ರೇಕ್ಷಕರು ರಾಜ್ಯಾದ್ಯಂತದಿಂದ ಭಾಗವಹಿಸಲಿದ್ದಾರೆ.
ಸಾಮೂಹಿಕ ಪಥ ಸಂಚಲನ,ಶಿಶು ನೃತ್ಯ ,ಘೋಷ್ ಪ್ರದರ್ಶನ , ನಿಯುದ್ಧ, ಯೋಗಾಸನ, ಜಡೆಕೋಲಾಟ, ತುಳು ಗೀತಾ ನೃತ್ಯ, ಕೋಲ್ಮಿಂಚು ಪ್ರದರ್ಶನ, ಕುಣಿತ ಭಜನೆ, ದೀಪಾರತಿ, ಮಲ್ಲಕಂಬ, ನೃತ್ಯ ವೈವಿಧ್ಯ, ಏಕ ಚಕ್ರ ದ್ವಿಚಕ್ರ ಸಮತೋಲನ, ಬೆಂಕಿಸಾಹಸ, ಚೆಂಡೆ ವಾದನ , ಸ್ಕೇಟಿಂಗ್,ಕೂಪಿಕಾ ಪ್ರದರ್ಶನಗಳು ನಡೆಯಲಿವೆ.
ವಿಶೇಷ ಆಕರ್ಷಣೆ
ಅಡ್ವಾಣಿಯರ ಅಯೋಧ್ಯ ರಥ ಯಾತ್ರೆ ಹಾಗೂ ಕರ ಸೇವಕರು ಅಯ್ಯೋಧ್ಯೆಯಲ್ಲಿ ನಡೆಸಿದ ಹೋರಾಟ ಹಾಗೂ ರಾಮಮಂದಿರದ ಅವಿಸ್ಮರಣೀಯ ಕ್ಷಣಗಳ ಸನ್ನಿವೇಶಗಳನ್ನು ಮೈದಾನದಲ್ಲಿ ಮರು ಪ್ರದರ್ಶಿಸಲಿದ್ದಾರೆ. ಪ್ರೌಢ ಶಾಲೆ 871 ವಿದ್ಯಾರ್ಥಿಗಳು ಮೈದಾನದ ಹೊನಲು ಬೆಳಕಿನಲ್ಲಿ ಲಯಬದ್ಧವಾಗಿ ಕುಣಿದು ಕುಪ್ಪಳಿಸಿ ನಿರ್ಮಿಸುವ ರಂಗೋಲಿಗಳ ಚಿತ್ತಾರ ಸಾಲುಸಾಲಾಗಿ ಕುಳಿತು ಮಾಡುವ ಸಾಮೂಹಿಕ ರಚನೆಗಳನ್ನು ಮಾಡಲಿದ್ದಾರೆ ಚಂದ್ರಯಾನ 2 ಉಡಾವಣೆಯ ದೃಶ್ಯಗಳು ಮರುಕಳಿಸಲಿವೆ.
ಮುಖ್ಯ ಅತಿಥಿಗಳಾಗಿ ಪಾಂಡಿಚೇರಿಯ ರಾಜ್ಯಪಾಲ ಡಾ.ಕಿರಣ್ ಬೇಡಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಸುರೇಶ್ ಸಿ.ಅಂಗಡಿ, ಕರ್ನಾಟಕ ರಾಜ್ಯ ಸಚಿವರಾದ ಬಸವರಾಜ್ ಬೊಮ್ಮಾಯಿ, ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮ ಮೂರ್ತಿ , ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಕೊಪ್ಪಳ, ವೈ ದೇವೇಂದ್ರಪ್ಪ ಬಳ್ಳಾರಿ, ಶಾಸಕರಾದ ಹಾಲಪ್ಪ ಆಚಾರ್ ಕೊಪ್ಪಳ, ಶಿವರಾಜ್ ಪಾಟೀಲ್, ನೆಹರು ಓಲೆಕಾರ್ ಹಾವೇರಿ, ವಿರೂಪಾಕ್ಷ ಬಳ್ಳಾರಿ, ಕೆ.ಗೋಪಾಲಯ್ಯ ಬೆಂಗಳೂರು,ಪೂರ್ಣಿಮ ಶ್ರೀನಿವಾಸ್ ಚಿತ್ರ ದುರ್ಗ, ಚಿತ್ರನಟಿ ಪ್ರಣೀತಾ ಸುಭಾಶ್ ಸೇರಿದಂತೆ ಹಲವು ಶಾಸಕರು, ಜನಪ್ರತಿನಿಧಿಗಳು ,ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿದ್ಯಾಕೇಂದ್ರ ಸಂಚಾಲಕ ವಸಂತ ಮಾಧವ, ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ ಕಟ್ಟೆ ಉಪಸ್ಥಿತರಿದ್ದರು.