ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ….
ಬಂಟ್ವಾಳ : ಸಾಹಿತ್ಯ ಸಮ್ಮೇಳನ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಆಶಯಗಳನ್ನು ಸೃಷ್ಟಿಸುವ ಕಾರ್ಯದ ಜೊತೆಗೆ ಇಚ್ಛಾಶಕ್ತಿ ಯ ಮನೋಭೂಮಿಕೆಗೆ ಬುನಾದಿ ಹಾಕುತ್ತದೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದ.28 ಮತ್ತು 29 ರಂದು ನಡೆಯಲಿರುವ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎತ್ತ ನೋಡಿದರತ್ತ ಕೇವಲ ಭ್ರಮೆಗಳನ್ನೇ ಸೃಷ್ಟಿಸುವ ಕಾರ್ಯಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿ ಸಮ್ಮೇಳನ ಹೊಸ ಭಾಷ್ಯ ಬರೆಯಲಿ ಎಂದವರು ಆಶಿಸಿದರು. ಸಮ್ಮೇಳನ ಆಮಂತ್ರಣ ಪತ್ರಿಕೆಯನ್ನು ತಹಶೀಲ್ದಾರ್ ರಶ್ಮೀ ಎಸ್.ಆರ್ ಬಿಡುಗಡೆಗೊಳಿಸಿ ಮಾತನಾಡಿ , ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಖುಷಿಯ ವಿಚಾರವಾಗಿದ್ದು,ಕನ್ನಡದ ವೈಶಿಷ್ಟ್ಯ ವನ್ನು ಎತ್ತಿ ಹಿಡಿಯುವ ಕಾರ್ಯ ಎಲ್ಲೆಡೆ ನಡೆಯಲಿ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಣಿ ಪರಿಸರ ವ್ಯಾಪ್ತಿಗೆ ಒಳಪಟ್ಟ 11 ಗ್ರಾಮಗಳ ಎಲ್ಲಾ ಸಾಹಿತ್ಯಾಸಕ್ತರ ಒಗ್ಗೂಡುವಿಕೆಯೊಂದಿಗೆ ನಡೆಸಬೇಕಾಗಿದೆ, ಪ್ರತಿಯೊಬ್ಬರೂ ಈ ನೆಲೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಸ್ವಾಗತ ಸಮಿತಿ ಹಾಗೂ ಉಪಸಮಿತಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದು, ಮನೆಯ ಕಾರ್ಯಕ್ರಮದಂತೆ ತೊಡಗಿಸಿಕೊಳ್ಳೋಣ ಎಂದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ವಾಗತ ಸಮಿತಿ ಸಂಚಾಲಕ ಗಂಗಾಧರ ರೈ, ಜಗನ್ನಾಥ ಚೌಟ, ಕಸಾಪ ಗೌರವ ಕಾರ್ಯದರ್ಶಿ ನಾಗವೇಣಿ ಮಂಚಿ, ಗಂಗಾಧರ ಆಳ್ವ, ವಿಜಯಲಕ್ಷ್ಮೀ ವಿ.ಶೆಟ್ಟಿ, ಗ್ರೇಸ್ ಪಿ.ಸಲ್ದಾನ, ಡಾ.ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಸಿ.ಶ್ರೀಧರ್ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕುಕ್ಕಾಜೆ ವಂದಿಸಿದರು.