ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಎಂಸಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ…

ಪುತ್ತೂರು: ದಿನ ದಿನವೂ ತಂತ್ರಜ್ಞಾನಗಳು ಬೆಳೆಯುತ್ತಲೇ ಹೋಗುತ್ತವೆ. ಪಠ್ಯಕ್ರಮವನ್ನು ಹೊರತುಪಡಿಸಿ ಈ ನೂತನ ವಿಷಯಗಳನ್ನು ನಾವು ಕಲಿಯದೇ ಹೋದರೆ ಸಾಕಷ್ಟು ಹಿಂದುಳಿಯುತ್ತೇವೆ ಎಂದು ಪುತ್ತೂರಿನ ಸ್ವಾಯತ್ತ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಉದ್ದೀಪನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಕ್ಷಣದ ಜತೆಗೆ ಹವ್ಯಾಸಗಳನ್ನೂ ಬೆಳೆಸಿಕೊಳ್ಳಬೇಕು ಜೀವನದ ಏಕತಾನತೆಯಿಂದ ಹೊರಬರುವುದಕ್ಕೆ ಇದು ಸಹಕಾರಿಯಾಗುತ್ತದೆ. ನೈತಿಕತೆ, ಮಾನವೀಯತೆ ಮತ್ತು ನಾಗರಿಕತೆಯು ಶಿಕ್ಷಣದ ಜತೆಯಲ್ಲಿ ಸೇರಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಲಭ್ಯವಾಗುತ್ತದೆ ಎಂದರು.
ಗೌರವ ಅತಿಥಿಗಳಾದ ಪುತ್ತೂರಿನ ಸ್ವಾಯತ್ತ ವಿವೇಕಾನಂದ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಕಾಶ್ ಕುಮಾರ್ ಮಾತನಾಡಿ ಕಲಿಯಿರಿ, ಅಭ್ಯಸಿಸಿ ಮತ್ತು ನವೀಕೃತರಾಗಿ ಎನ್ನುವುದು ವಿದ್ಯಾರ್ಥಿಗಳ ಧ್ಯೇಯ ವಾಕ್ಯವಾಗಿರಬೇಕು, ಕಲಿಕೆಯಲ್ಲಿ ಹೆಚ್ಚಿನ ಕೌಶಲ್ಯಗಳನ್ನು ತೋರದೇ ಹೋದರೆ ಇತರರು ನಮ್ಮನ್ನು ಹಿಂದಿಕ್ಕಿ ಹೋಗುತ್ತಾರೆ ಎಂದರು. ಸ್ನಾತಕೋತ್ತರ ಕಲಿಕೆಯ ನಂತರ ಮುಂದೇನು ಎನ್ನುವುದನ್ನು ನಿರ್ಧರಿಸಿ ಅದಕ್ಕೆ ಪೂರಕವಾದ ವಿಷಯಗಳನ್ನು ಅಭ್ಯಸಿಸಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ .ಕೆ ಮಾತನಾಡಿ ವಿದ್ಯಾರ್ಥಿಗಳಿಗೆ ಆವಶ್ಯಕವಾದ ಎಲ್ಲಾ ಸವಲತ್ತುಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಕ್ಯಾಂಪಸ್ ನೇಮಕಾತಿಗೆ ಸಂಬಂಧಿಸಿದಂತೆ ಪೂರಕ ತರಬೇತಿಗಳನ್ನೂ ನೀಡಲಾಗುತ್ತದೆ ಅವಕಾಶಗಳನ್ನು ಬಳಸಿಕೊಳ್ಳುವ ಜಾಣ್ಮೆ ನಿಮ್ಮಲ್ಲಿರಬೇಕು ಎಂದರು. ಆನ್‍ಲೈನ್ ಮುಖಾಂತರ ಅನೇಕ ಉಚಿತ ತರಬೇತಿಗಳು ಲಭ್ಯವಿವೆ ಅದನ್ನೂ ಕೂಡಾ ಜತೆಯಲ್ಲಿ ಅಭ್ಯಸಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಕೋವಿಡ್ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅವರು ಆರಾಮ ವಲಯದಲ್ಲಿದ್ದಾರೆ. ಹೆಚ್ಚು ಪರಿಶ್ರಮಪಡುವ ಕೆಲಸದಿಂದ ದೂರ ಉಳಿಯುತ್ತಿದ್ದಾರೆ ಇದು ತುಂಬಾ ಅಪಾಯಕಾರಿ ಎಂದರು. ಈ ಮನಸ್ಥಿತಿಯಿಂದ ಹೊರಬರದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಜೀವನ ಸಮಸ್ಯೆಗಳನ್ನು ಎದುರಿಸಲು ಕಷ್ಟವಾಗಬಹುದು ಎಂದರು.
ಶೈಕ್ಷಣಿಕವಾಗಿ ಉನ್ನತ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ ಸ್ವಾಗತಿಸಿದರು. ಪ್ರೊ.ವಾಸುದೇವ ಶೆಣೈ ವಂದಿಸಿದರು. ವಿದ್ಯಾರ್ಥಿಗಳಾದ ಚಂದನ್ ಹಾಗೂ ಮೆರೋಲಿನ್ ಕಾರ್ಯಕ್ರಮ ನಿರ್ವಹಿಸಿದರು.


