ಉಪನ್ಯಾಸಕಿ ಉಷಾ ಕೆ.ವಿ ಅವರ “ವೇದಾಂತ” ಮತ್ತು “ಸ್ಪಂದನ” ಕೃತಿಗಳ ಲೋಕಾರ್ಪಣೆ…

ಪಠ್ಯ ಯೋಗ್ಯ ಕೃತಿ- ಪುರಂದರ ಭಟ್...

ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಉಪನ್ಯಾಸಕಿ ಶ್ರೀಮತಿ ಉಷಾ ಕೆ.ವಿ ಅವರ “ವೇದಾಂತ” ಹಾಗೂ “ಸ್ಪಂದನ” ಕೃತಿಗಳ ಲೋಕಾರ್ಪಣಾ ಸಮಾರಂಭವು ಫೆ. 21 ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ಆಪ್ತ ವರ್ಗದ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು.

ಕಳೆದ 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಉಷಾ ಕೆ.ವಿ ಅವರು ಸುಳ್ಯದ ಸರಕಾರಿ ಜೂನಿಯರ್ ಕಾಲೇಜು ಹಾಗೂ ಕಬಕದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕೋಡಿಂಬಾಡಿಯಲ್ಲಿ ವಾಸವಾಗಿರುವ ಇವರು, ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ವಿಷ್ಣು ಭಟ್ ಅವರ ಪತ್ನಿಯಾಗಿದ್ದಾರೆ. ತಮ್ಮ ಅಧ್ಯಯನ–ಅನುಭವಗಳ ಸಾರವನ್ನು ಸಾಹಿತ್ಯ ರೂಪದಲ್ಲಿ ಓದುಗರಿಗೆ ಅರ್ಪಿಸಿರುವುದು ಕಾರ್ಯಕ್ರಮದಲ್ಲಿ ಸರ್ವ ಅತಿಥಿಗಳಿಂದ ವಿಶೇಷವಾಗಿ ಪ್ರಶಂಸಿಸಲಾಯಿತು.

ಕಾರ್ಯಕ್ರಮವು ಲೇಖಕರ ಮೊಮ್ಮಕ್ಕಳಾದ ಕು. ಸಾಧ್ವಿ ಮತ್ತು ಕು.ತನಿಶಿ, ಮಾ. ಅಕ್ಷಜ್, ಹಾಗೂ 3 ವರ್ಷದ ಪುಟಾಣಿ ಅಗಸ್ತ್ಯ ಅವರ ಮಧುರ ಪ್ರಾರ್ಥನೆಯೊಂದಿಗೆ ಆರಂಭಗೊಂದಿರುವುದು ಮಾತ್ರವಲ್ಲದೇ, ಪುಟಾಣಿ ಮಕ್ಕಳೇ ಖುಷಿಖುಷಿಯಾಗಿ ಕುಣಿಯುತ್ತಾ ವೇದಿಕೆಗೆ ಬಂದು ಅತಿಥಿಗಳಿಗೆ ಕನ್ನಡದ ಶಾಲು ಹೊದಿಸಿ ಸ್ಮರಣಿಕೆಗಳನ್ನು ಅರ್ಪಿಸಿರುವುದು ಜೊತೆಗೆ ಪ್ರತಿ ಬಿಡುಗಡೆ ಸಮಾರಂಭದಲ್ಲಿ ಈ ಎಲ್ಲಾ ಪುಟಾಣಿಗಳು ನೂತನ ಕೃತಿಯನ್ನು ಹಿಡಿದು ಸಂಭ್ರಮಿಸಿದ್ದು ಸಮಾರಂಭದ ಅತ್ಯಂತ ಮನಮುಟ್ಟುವ ಕ್ಷಣವಾಗಿತ್ತು. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಕೇವಲ ಹಿರಿಯರಿಗಷ್ಟೇ ಸೀಮಿತವಾಗದೆ, ಮಕ್ಕಳಿಗೂ ಆಕರ್ಷಕವಾಗುತ್ತಾ ಜನಸಾಮಾನ್ಯರಿಗೂ ಇನ್ನಷ್ಟು ಸಮೀಪವಾಗುತ್ತಿರುವುದು ಈ ಸಂದರ್ಭದಲ್ಲೇ ಸ್ಪಷ್ಟವಾಯಿತು

ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಪುರಂದರ ಭಟ್ ದೀಪಪ್ರಜ್ವಲನ ನೆರವೇರಿಸಿ ಮಾತನಾಡಿ, ಲೇಖಕಿ ಅಧ್ಯಯನಶೀಲ ವ್ಯಕ್ತಿತ್ವದವರಾಗಿದ್ದು, ಬಿಡುಗಡೆಯಾದ ಕೃತಿಗಳು ಶೈಕ್ಷಣಿಕ ಮೌಲ್ಯಗಳನ್ನು ಒಳಗೊಂಡಿವೆ. ಯಾವುದೇ ಭಯವಿಲ್ಲದೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಿರುವುದು ಪ್ರಶಂಸನೀಯವಾಗಿದ್ದು, ಈ ಕೃತಿಗಳು ಪಠ್ಯಪುಸ್ತಕ ಮಟ್ಟಕ್ಕೂ ಯೋಗ್ಯವಾಗಿವೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಪ್ರೊ. ಹರಿ ನಾರಾಯಣ ಮಾಡಾವು ಅವರು “ವೇದಾಂತ” ಕೃತಿಯನ್ನು ಲೋಕಾರ್ಪಣೆ ಮಾಡಿ, ವೇದಗಳ ಸಾರವನ್ನು ಹೊಸ ಓದುಗರಿಗೂ ಮನಮುಟ್ಟುವಂತೆ ವಿವರಿಸಿರುವುದು ಕೃತಿಯ ವಿಶೇಷತೆ ಎಂದು ಹೇಳಿದರು. “ಆನೆಯನ್ನು ಕನ್ನಡಿಯಲ್ಲಿ ತೋರಿಸುವ ಪ್ರಯತ್ನದಂತಿದೆ ಈ ಕೃತಿ; ಇದು ವೇದಾಂತ–ಸ್ಪಂದನದ ಸಾರ್ಥಕ ಸಂವಾದ” ಎಂದು ಲೇಖಕಿಯ ಪ್ರಯತ್ನವನ್ನು ಕೊಂಡಾಡಿದರು.

ಪ್ರೊ. ಬಿ.ವಿ. ಸೂರ್ಯನಾರಾಯಣ ಅವರು “ಸ್ಪಂದನ” ಕೃತಿಯನ್ನು ಬಿಡುಗಡೆಗೊಳಿಸಿ, ಗತಕಾಲದ ವೈಭವವನ್ನು ವರ್ತಮಾನಕ್ಕೆ ಜೋಡಿಸುವ ಧೈರ್ಯ ಲೇಖಕಿಯದು. ಸನಾತನ ಸಂಸ್ಕೃತಿಯ ಶ್ರೀಮಂತಿಕೆಯನ್ನು ನಿರ್ಭೀತಿಯಾಗಿ, ಮೊನಚಾದ ಮಾತುಗಳ ಮೂಲಕ ತನ್ನ ನಿಲುವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿ, ಉಷಾ ಕೆ.ವಿ ಅವರನ್ನು ಧೈರ್ಯಶಾಲಿ ಮಹಿಳೆ ಎಂದು ಹೊಗಳಿದರು.

‘ಆಯುರ್ವೇದದಲ್ಲಿ ಯೋಗ’ ವಿಷಯದ ಕುರಿತು ಕೋಡಿಂಬಾಡಿಯ ಅತ್ರಿವನ ಆಯುರ್ವೇದಿಕ್ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಆಯುರ್ವೇದ ವೈದ್ಯರಾದ ಡಾ. ದತ್ತಾತ್ರೇಯ ಅವರು ಉಪನ್ಯಾಸ ನೀಡಿ, ಯೋಗ ಮತ್ತು ಆಯುರ್ವೇದ ಪರಸ್ಪರ ಪೂರಕವಾಗಿದ್ದು, ಮನುಷ್ಯನಿಗೆ ಇರುವ ವಿವೇಚನಾ ಶಕ್ತಿಯನ್ನು ಸದುಪಯೋಗಪಡಿಸಿಕೊಂಡರೆ ಮಾತ್ರ ಆರೋಗ್ಯಕರ ಜೀವನ ಸಾಧ್ಯವೆಂದು ವಿವರಿಸಿದರು.

ಕೃತಿಕಾರರಾದ ಉಷಾ ಕೆ.ವಿ ಅವರು ಪ್ರಾಸ್ತಾವಿಕ ಭಾಷಣದಲ್ಲಿ ವೇದಗಳ ಮಹತ್ವವನ್ನು ವಿವರಿಸಿ, ತಮ್ಮ ಅಳಿಯ ಡಾ. ದತ್ತಾತ್ರೇಯ ಅವರು ನೀಡಿದ ವೇದಗಳ ಕುರಿತಾದ ಕೃತಿಯೇ “ವೇದಾಂತ” ಪುಸ್ತಕದ ಉಗಮಕ್ಕೆ ಪ್ರೇರಣೆಯಾದ ವಿಚಾರವನ್ನು ಹಂಚಿಕೊಂಡರು. ಕೃತಿಗಳ ಹಿನ್ನಲೆ ಮತ್ತು ಉದ್ದೇಶಗಳನ್ನು ಮನಮುಟ್ಟುವಂತೆ ವಿವರಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಉಮೇಶ್ ನಾಯಕ್ ಅವರು, ಸಾಹಿತ್ಯ ಪರಿಷತ್ತಿನ ವೇದಿಕೆ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರನ್ನು ಒಗ್ಗೂಡಿಸುವ ಸಂವಾದ ವೇದಿಕೆಯಾಗುತ್ತಿದೆ. ಸಾಹಿತ್ಯ ಹಾಗೂ ಸಾಹಿತಿಗಳ ಸೇವೆಗೆ ಪರಿಷತ್ತು ಸದಾ ಕಟಿಬದ್ಧವಾಗಿದೆ ಎಂದು ತಿಳಿಸಿದರು.

ಕೃತಿಕಾರರ ಮಗಳಾದ ಡಾ. ದೃತಿ ಅವರು ಸ್ವಾಗತ ಭಾಷಣಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರಮೇಶ್ ನಾಯಕ್ ನಿಡ್ಯ ಅವರು ಸಮರ್ಪಕವಾಗಿ ನಿರ್ವಹಿಸಿದರು. ಕೊನೆಯಲ್ಲಿ ಶ್ರೀ ವನಮಾಲಿ ಭಟ್ ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಅತಿಥಿಗಳು, ಸಾಹಿತ್ಯಾಸಕ್ತರು ಹಾಗೂ ಮಕ್ಕಳಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

ಹಿರಿಯ ಸಾಹಿತಿಗಳಾದ ಪ್ರೊ.ವಿ.ಬಿ ಆರ್ತಿಕಜೆ, ಡಾ. ಎಚ್ ಜಿ ಶ್ರೀಧರ್, ಡಾ. ಶ್ರೀಶ ಕುಮಾರ್, ಡಾ ವಿಷ್ಣು ಭಟ್, ಶ್ರೀಮತಿ ಶಂಕರಿ ಶರ್ಮ,ಶ್ರೀ ಸುಬ್ರಹ್ಮಣ್ಯ ಶರ್ಮ, ಮಲ್ಲಿಕಾ ಜೆ ರೈ ಮುಂತಾದ ಸಾಹಿತ್ಯಾಸಕ್ತರ ಉಪಸ್ಥಿತಿಯಿಂದ ಸಮಾರಂಭವು ಜ್ಞಾನ, ಮೌಲ್ಯ ಮತ್ತು ಸಂಸ್ಕೃತಿಯ ಸಾರ್ಥಕ ಸಂಭ್ರಮವಾಗಿ ಮೂಡಿಬಂದಿತು.

whatsapp image 2026 02 24 at 4.35.42 pm

Related Articles

Back to top button