ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸಲು ಅವಕಾಶ ನೀಡದ ರಾಜ್ಯ ಸರಕಾರದ ತೀರ್ಮಾನ ಖಂಡನೀಯ- ಟಿ.ಎಂ. ಶಹೀದ್ ತೆಕ್ಕಿಲ್ ….
ಬೆಂಗಳೂರು: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡಲು ದೇಶದ ಪ್ರತಿಯೊಬ್ಬ ನಾಗರಿಕರಿಗೆ ಅಧಿಕಾರವಿರುತ್ತದೆ. ಆದರೆ ಕರ್ನಾಟಕ ಸರಕಾರ ಪ್ರತಿಭಟನೆ ಮಾಡಲು ಅವಕಾಶ ನೀಡದೆ 144 ಸೆಕ್ಷನ್ ಹಾಕಿರುವುದು ಖಂಡನೀಯ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ತಿಳಿಸಿರುತ್ತಾರೆ.
ದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರಿಗೂ ಶಾಂತಿಯುತ ಪ್ರತಿಭಟನೆಗೆ ಅವಕಾಶವಿರುತ್ತದೆ. ಜಾತ್ಯಾತೀತ ತತ್ವ ಹೊಂದಿರುವ ಹಿಂದೂ ಸಹೋದರರೂ ಈ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವುದು ಶ್ಲಾಘನೀಯ, ಬಹುತೇಕ ಎಲ್ಲಾ ಪಕ್ಷದ – ಸಂಘಟನೆಗಳ ಜನರು ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವುದು ಭಾರತ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ದೇಶ ಎಂದು ತೋರಿಸುತ್ತದೆ.
ಭಾರತದಲ್ಲಿರುವ ಮುಸಲ್ಮಾನರಲ್ಲಿ 99.5 % ಮಂದಿ ಶಾಂತಿ ಸೌಹಾರ್ದತೆಯನ್ನು ಬಯಸುತ್ತಾರೆ. ಇತ್ತೀಚೆಗೆ ಅಯೋಧ್ಯೆ ತೀರ್ಪು ಬಂದಾಗಲೂ ಮುಸಲ್ಮಾನರು ಶಾಂತಿಯನ್ನು ಕಾಪಾಡಿದ್ದಾರೆ. ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದ ಈ ದೇಶದ ಜನರಲ್ಲಿ ಕಾಯ್ದೆ ಮೂಲಕ ಆತಂಕ ಬಿತ್ತುವ ಕೆಲಸ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ನಾವೆಲ್ಲಾ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಟಿ.ಎಂ. ಶಹೀದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸಹ ಪ್ರತಿಭಟನೆ ಮಾಡಲು ಅವಕಾಶ ನೀಡದೆ ಇರುವುದು ಖಂಡನೀಯ. ಹಾಗೂ ಪ್ರತಿಭಟನಾಕಾರರು ಕೂಡಾ ಶಾಂತಿಯುತ ಪ್ರತಿಭಟನೆ ಮಾಡಬೇಕು, ಪೋಲೀಸರ ವಿರುದ್ಧ ಕಲ್ಲು ತೂರಾಟ ಮಾಡಬಾರದು, ಪೊಲೀಸರು ಕೂಡಾ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಬಾರದೆಂದು ಅವರು ಮನವಿ ಮಾಡಿದ್ದಾರೆ.