ದ.28,29 ಮಾಣಿಯಲ್ಲಿ 20ನೇ ಕನ್ನಡ ಸಾಹಿತ್ಯ ಸಮ್ಮೇಳನ…
ಬಂಟ್ವಾಳ: ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಣಿ ನಾಗರಿಕರ ಸ್ವಾಗತ ಸಮಿತಿಯ ಆಶ್ರಯದಲ್ಲಿ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನವು ದ.28,29 ರಂದು ಮಾಣಿಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಜರಗಲಿದೆ ಎಂದು ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಮೋಹನ್ ರಾವ್ ತಿಳಿಸಿದರು.
ಅವರು ಮಾಣಿಯಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಸಾಹಿತ್ಯದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಡಾ.ಧರಣೀದೇವಿ ಮಾಲಗತ್ತಿಯವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನವು 2 ದಿನ ವಿಜೃಂಭನೆಯಿಂದ ನಡೆಯಲಿದೆ. ವಿವಿಧ ಗೋಷ್ಟಿಗಳನ್ನು ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು.
ದಿ. 28 ರಂದು ಬೆಳಿಗ್ಗೆ 10 ಕ್ಕೆ ಜಿ.ಪಂ ಸದಸ್ಯೆ ಮಂಜುಳಾ ಮಾಧವ ಮಾವೆ ರಾಷ್ಟ್ರ ಧ್ವಜಾರೋಹಣ , ಕ.ಸಾ.ಪ. ಜಿಲ್ಲಾಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಗ್ರಾ.ಪಂ ಅಧ್ಯಕ್ಷ ಮಮತಾ ಶೆಟ್ಟಿ ಕನ್ನಡ ಧ್ವಜಾರೋಹಣ ನೆರವೇರಿಸುವರು
ಅಪರಾಹ್ನ 3 ಗಂಟೆಗೆ ಮಾಣಿ ರಾಜ್‍ಕಮಲ್ ಅಡಿಟೋರಿಯಮ್ ನಿಂದ ಸಮ್ಮೇಳನದ ಸಭಾಂಗಣದ ವರೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ. 4.30 ಕ್ಕೆ ಡಾ. ಬಿ.ಪ್ರಭಾಕರ ಶಿಶಿಲ ಸುಳ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಾ.ಧರಣೀದೇವಿ ಮಾಲಗತ್ತಿಯವರ ಸಮ್ಮೇಳನಾಧ್ಯಕ್ಷತೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಹೊಸ ಕೃತಿಗಳ ಬಿಡುಗಡೆ ಮಾಡಲಿದ್ದಾರೆ. ಗಣ್ಯರ ಉಪಸ್ಥಿತಿಯಲ್ಲಿ ವಸ್ತುಪ್ರದರ್ಶನ ಉದ್ಘಾಟನೆ, ಪುಸ್ತಕ ಪ್ರದರ್ಶನ ಉದ್ಘಾಟನೆ ನಡೆಯಲಿದೆ.
6.35 ರಿಂದ ಮೊದಲ ಗೋಷ್ಟಿ ಕೃಷಿ ಸಂಸ್ಕೃತಿ ಅಡಿಕೆ ಕೃಷಿ ಸವಾಲುಗಳು ನಡೆಯಲಿದೆ. ಬಳಿಕ ಮೌನೇಶ್ ವಿಶ್ವಕರ್ಮ ನಿರ್ದೇಶನದ ನಾಟಕ ನಮ್ಮ ಬಾಪು, ಕೆ.ವಿ.ರಮಣ್ ನಿರ್ದೇಶನದ ನಾಟ್ಯಾಯನ ಪ್ರದರ್ಶನಗೊಳ್ಳಲಿದೆ.
ದಿ.29 ರಂದು ಅರ್ಬಿ ಶ್ರೀನಿವಾಸ ಶೆಟ್ಟಿ ಸಭಾಂಗಣದಲ್ಲಿ ಉರ್ದಿಲಗುತ್ತು ಇಂದುಹಾಸ ರೈ ವೇದಿಕೆಯಲ್ಲಿ ಉದಯೋನ್ಮುಖ ಸಾಹಿತ್ಯ ಗೋಷ್ಟಿ, ಜನಪದ ಸಂಸ್ಕೃತಿ -ಯಕ್ಷಗಾನ, ಸಾಹಿತ್ಯ ವೈವಿದ್ಯಪ್ರಸ್ತುತಿ, ಯಕ್ಷಗಾನ ಭಾಗವತಿಕೆಯ ಅನನ್ಯತೆ, ಮರೆಯಲಾಗದ ಮಹಾನುಭಾವರು ನುಡಿ ನಮನ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಪರಿಚಯ, ಶಾಸಕ ಸಂಜೀವ ಮಠಂದೂರು ಪುತ್ತೂರು ಇವರು ಸಾಧಕರಿಗೆ ಸನ್ಮಾನ ನೆರವೇರಿಸಲಿದ್ದಾರೆ.
ಕರ್ನಾಟಕ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಬಾಲಕೃಷ್ಣ ಪೂಜಾರಿ ನಿರ್ದೇಶನದ ನರಕಾಸುರ ಮೋಕ್ಷ ಯಕ್ಷಗಾನ, ಕಲ್ಲಡ್ಕ ಡ್ಯಾನ್ಸ್ ಫೌಂಡೇಶನ್‍ರವರಿಂದ ಭರತನಾಟ್ಯ ನಡೆಯಲಿದೆ.
ಸಂಜೆ 5ರಿಂದ ಸಮಾರೋಪ ಸಮಾರಂಭದಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ಮಂಗಳೂರಿನ ಪ್ರೊ.ಬಾಲಕೃಷ್ಣ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ. ವಾಮದಪದವು ಕನ್ನಡ ಸಾಹಿತ್ಯಾಭಿಮಾನಿಗಳು ಮುಂದಿನ ಸಮ್ಮೇಳನದ ವೀಳ್ಯ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು
ಪತ್ರಿಕಾಗೋಷ್ಟಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಜಡ್ತಿಲ ಪ್ರಹ್ಲಾದ ಶೆಟ್ಟಿ ಕಾರ್ಯಾಧ್ಯಕ್ಷೆ ಮಂಜುಳಾ ಮಾಧವ ಮಾವೆ, ಸಂಚಾಲಕರಾದ ಗಂಗಾಧರ ಆಳ್ವ ಅನಂತಾಡಿ, ಬಾಲಕೃಷ್ಣ ಆಳ್ವ ಕೊಡಾಜೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಧರ್ ಸಿ., ವಿಜಯಲಕ್ಷ್ಮಿ ವಿ.ಶೆಟ್ಟಿ , ಕೋಶಾಧಿಕಾರಿ ಜಗನ್ನಾಥ ಚೌಟ ಬದಿಗುಡ್ಡೆ, ಗಂಗಾಧರ ರೈ ಮಾಣಿ. ಲತೀಫ್ ನೇರಳಕಟ್ಟೆ, ಜಯಾನಂದ ಪೆರಾಜೆ, ರವೀಂದ್ರ ಕುಕ್ಕಾಜೆ, ಕೃಷ್ಣ ಶರ್ಮ ಉಪಸ್ಥಿತರಿದ್ದರು.