ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು -ಮಾದಕ ದ್ರವ್ಯ ತಡೆಗಟ್ಟುವಿಕೆಯ ಜಾಗೃತಿ ಕಾರ್ಯಕ್ರಮ…
ಪುತ್ತೂರು: ಇತ್ತೀಚಿನ ದಿನಗಳಲ್ಲಿ ಯುವಜನತೆ ಡ್ರಗ್ಸ್ ಮತ್ತು ಮಾದಕ ವ್ಯಸನದ ದಾಸರಾಗುತ್ತಿದ್ದು, ಇದರಿಂದ ಅವರ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಹದಗೆಡುತ್ತದೆ ಎಂದು ಪುತ್ತೂರಿನ ಅಬಕಾರಿ ಇಲಾಖೆಯ ಇನ್ಸ್‍ಪೆಕ್ಟರ್ ಲೋಕೇಶ್.ಸಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ವಿಭಾಗ, ಕಾಲೇಜಿನ ಆ್ಯಂಟಿ ರ್ಯಾಗಿಂಗ್ ಸಮಿತಿ ಮತ್ತು ಆ್ಯಂಟಿ ಡ್ರಗ್ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ಮಾದಕ ದ್ರವ್ಯ ತಡೆಗಟ್ಟುವಿಕೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೋ ಆಮಿಶಗಳಿಗೆ ಬಲಿಯಾಗಿ ಒಮ್ಮೆ ಮಾದಕ ದ್ಯವ್ಯ ಸೇವನೆ ಪ್ರಾರಂಭವಾದರೆ ಅವನ ಜೀವನ ನಾಶವಾಗುವುದಲ್ಲದೆ ಕುಟುಂಬದ ಮತ್ತು ಇಡೀ ಸಮಾಜದ ಸ್ವಾಸ್ಥ್ಯವೇ ಕದಡುತ್ತದೆ. ಇದರ ಸೇವನೆ ಚಟವಾಗಿ ಪರಿಣಮಿಸುತ್ತಾ ಹೋದಂತೆ ಮೆದುಳಿನ ನರಗಳು ನಿಶ್ಯಕ್ತಿಯನ್ನು ಹೊಂದಿ ಆತ ಖಿನ್ನತೆಗೆ ಒಳಗಾಗಿ ಜೀವನವನ್ನೇ ಕೊನೆಗಾಣಿಸುವಂತಾಗುತ್ತದೆ ಎಂದರು. ಈಗಿನ ಶಾಲಾ ಮಕ್ಕಳೂ ಈ ಪಿಡುಗಿಗೆ ಬಲಿಯಾಗುತ್ತಿರುವುದು ಅಪಾಯದ ಮುನ್ಸೂಚನೆ. ಒಮ್ಮೆ ಆ ಪಿಡುಗಿಗೆ ಬಲಿಯಾದರೆ ಅದರಿಂದ ಮುಕ್ತಿ ಹೊಂದುವುದು ಬಹಳ ಕಷ್ಟ ಹಾಗಾಗಿ ಇದರ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಉತ್ತಮ ಎಂದು ಹೇಳಿದರು. ತಮ್ಮ ಸೇವಾ ಅನುಭವವನ್ನು ಹಂಚಿಕೊಂಡ ಅವರು ಜೀವನದ ಗುರಿ ಸಾಧನೆಗೆ ನಶಾ ಮುಕ್ತ ಸಮಾಜವನ್ನು ನಿರ್ಮಿಸುವುದು ಆವಶ್ಯಕ. ಹೀಗಾಗಿ ಕಾಲೇಜು ಪರಿಸರವನ್ನು ಮಾದಕ ವಸ್ತು ಮುಕ್ತವನ್ನಾಗಿಸುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊಣೆಯರಿತು ಸಹಕರಿಸಬೇಕು ಮತ್ತು ಇದರ ಬಗ್ಗೆ ಕಾನೂನಿನ ತಿಳುವಳಿಕೆಯನ್ನೂ ಹೊಂದಬೇಕು ಎಂದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದ ಅವರು ಅವರ ಸಂದೇಹಗಳಿಗೆ ಸೂಕ್ತ ಉತ್ತರವನ್ನು ನೀಡಿದರು.
ಪುತ್ತೂರು ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ರಾಜಶೇಖರ್ ಮತ್ತು ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಮನ ಸ್ವಾಗತಿಸಿ, ಶಮಂತ್.ಕೆ.ಪಿ ವಂದಿಸಿದರು. ಕೆ.ಪಿ.ವೈಷ್ಣವಿ ಕಾರ್ಯಕ್ರಮ ನಿರ್ವಹಿಸಿದರು.



