ಸುಳ್ಯದ ಕೇರ್ಪಳದಲ್ಲಿ 10 ದಿನಗಳ ಕಾಲ ನಡೆದ ಪ್ರಶ್ನಾಚಿಂತನೆ…

ಶ್ರೀ ಭಸ್ಮೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರ ನಿರ್ಧಾರ...

ಸುಳ್ಯ: ಸುಳ್ಯ ನಗರದ ಕೇರ್ಪಳ, ಕುರುಂಜಿಗುಡ್ಡೆ ಹಾಗೂ ಭಸ್ಮಡ್ಕ ಪ್ರದೇಶದ ನಿವಾಸಿಗಳನ್ನು ಹಲವು ವರ್ಷಗಳಿಂದ ಕಾಡುತ್ತಿದ್ದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಶ್ನಾಚಿಂತನೆ ನಡೆಸಲಾಯಿತು. ಈ ಚಿಂತನೆಯ ವೇಳೆ, ಈ ಪ್ರದೇಶದಲ್ಲಿ ಪುರಾತನ ಕಾಲದಲ್ಲಿ ಶಿವಸಾನಿಧ್ಯವಿದ್ದುದು ಪತ್ತೆಯಾಗಿದೆ. ಆ ಸಾನಿಧ್ಯ ಮರುನಿರ್ಮಾಣವಾದರೆ ಪ್ರಸ್ತುತ ಇರುವ ದುರಿತಗಳು ನಿವಾರಣೆಯಾಗುತ್ತವೆ ಎಂಬ ನಿರ್ಣಯಕ್ಕೆ ಬರಲಾಗಿದೆ. ಇದರ ಹಿನ್ನೆಲೆಯಲ್ಲಿ ಶ್ರೀ ಭಸ್ಮೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರು ಒಮ್ಮತದಿಂದ ನಿರ್ಧರಿಸಿರುವುದು ವರದಿಯಾಗಿದೆ.

ಪ್ರಶ್ನಾಚಿಂತನೆ ಮುಕ್ತಾಯದ ವೇಳೆಗೆ ದೇವಾಲಯ ನಿರ್ಮಾಣಕ್ಕೆ ಅಗತ್ಯವಾದ ಜಾಗ ದೊರೆಯುತ್ತದೆ ಎಂದು ಜ್ಯೋತಿಷಿಗಳು ತಿಳಿಸಿದ್ದರು. ಅದೇ ರೀತಿಯಲ್ಲಿ, 10 ದಿನಗಳ ಕಾಲ ನಡೆದ ಪ್ರಶ್ನಾಚಿಂತನೆಯ ಕೊನೆಯ ದಿನವಾದ ಫೆಬ್ರವರಿ 18ರಂದು ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ಸುಮಾರು ಒಂದು ಕೋಟಿ ರೂ. ಮೌಲ್ಯದ 35 ಸೆಂಟ್ಸ್ ಜಾಗವನ್ನು ದೇವಾಲಯ ನಿರ್ಮಾಣಕ್ಕಾಗಿ ಅರ್ಪಿಸಲು ಮುಂದಾಗಿದ್ದಾರೆ. ಇದರಿಂದ ದೇವಾಲಯ ನಿರ್ಮಾಣ ಪ್ರಕ್ರಿಯೆ ಖಚಿತವಾದಂತಾಗಿದೆ.
ಈ ಪ್ರದೇಶದ ಜನರಲ್ಲಿ ಆರೋಗ್ಯ ಸಮಸ್ಯೆಗಳೊಂದಿಗೆ ಇತರ ಅಡಚಣೆಗಳೂ ಕಂಡುಬರುತ್ತಿದ್ದವು. ಒಂದೇ ರೀತಿಯ ಸಮಸ್ಯೆಗಳು ವ್ಯಾಪಕವಾಗಿ ಕಾಣಿಸಿಕೊಂಡ ಹಿನ್ನೆಲೆ, ಪರಿಹಾರ ಕಂಡುಕೊಳ್ಳಲು 2025ರ ಜೂನ್ ತಿಂಗಳಲ್ಲಿ ಸಭೆ ನಡೆಸಲಾಯಿತು. ಸುಮಾರು 35 ಮಂದಿ ಭಾಗವಹಿಸಿದ್ದ ಆ ಸಭೆಯಲ್ಲಿ ಜ್ಯೋತಿಷಿಗಳ ಸಲಹೆ ಪಡೆಯಲು ತೀರ್ಮಾನಿಸಲಾಯಿತು.
ಅದರಂತೆ ಕೇರಳದ ಅಣಂಗೂರಿನ ಮಧುಸೂದನ್ ಜ್ಯೋತಿಷಿಯನ್ನು ಸಂಪರ್ಕಿಸಿ ವಿಚಾರಿಸಿದಾಗ, ಪುರಾತನ ಸಾನಿಧ್ಯಗಳಿಗೆ ಸಮರ್ಪಕ ಆರಾಧನೆ ನಡೆಯದಿರುವುದೇ ಸಮಸ್ಯೆಗಳ ಮೂಲವೆಂದು ತಿಳಿಸಿದರು. ಸ್ಥಳದಲ್ಲಿಯೇ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸುವಂತೆ ಅವರು ಸಲಹೆ ನೀಡಿದರು. ಸಮಿತಿ ರಚಿಸಿ ಮುಂದುವರಿಯುವಂತೆ ಸೂಚಿಸಿದ ಹಿನ್ನೆಲೆ, ಕುರುಂಜಿ ರಾಮಯ್ಯ ಗೌಡರನ್ನು ಗೌರವಾಧ್ಯಕ್ಷರಾಗಿ, ಬಾಲಕೃಷ್ಣ ಮಣಿಯಾಣಿಯನ್ನು ಅಧ್ಯಕ್ಷರಾಗಿ ಮತ್ತು ಚಂದ್ರಶೇಖರ ಕೇರ್ಪಳರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ನಂತರ ಕೇರ್ಪಳ, ಕುರುಂಜಿಗುಡ್ಡೆ ಹಾಗೂ ಭಸ್ಮಡ್ಕ ಪ್ರದೇಶದ ಮನೆಮನೆಗೆ ಭೇಟಿ ನೀಡಿ ಮಾಹಿತಿ ಹಂಚಿ ಅಷ್ಟಮಂಗಲ ಪ್ರಶ್ನಾಚಿಂತನೆ ಆರಂಭಿಸಲಾಯಿತು. 2025ರ ಅಕ್ಟೋಬರ್ ತಿಂಗಳಲ್ಲಿ ಮೂರು ದಿನಗಳ ಚಿಂತನೆ ನಡೆದಿದ್ದು, ಜ್ಯೋತಿಷಿಗಳ ಸಲಹೆಯಂತೆ ಮೃತ್ಯುಂಜಯ ಹೋಮವನ್ನು ಕೇರ್ಪಳದ ಡಾ. ಗಿರೀಶ್ ಭಾರದ್ವಾಜ್ ಅವರ ಮನೆಯಲ್ಲಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.
ಮುಂದಿನ ಹಂತದ ಪ್ರಶ್ನಾಚಿಂತನೆ 2026ರ ಫೆಬ್ರವರಿ 16, 17 ಮತ್ತು 18ರಂದು ಗಿರೀಶ್ ಭಾರದ್ವಾಜ್ ಅವರ ಮನೆಯಲ್ಲಿ ಪೂರ್ಣಗೊಂಡಿತು. ಒಟ್ಟು 10 ದಿನಗಳ ಚಿಂತನೆ ವೇಳೆ, ಈ ಪ್ರದೇಶದಲ್ಲಿ ಪುರಾತನ ಕಾಲದಲ್ಲಿ ಶಿವಸಾನಿಧ್ಯವಿದ್ದು, ರಾಜಮನೆತನದಿಂದ ಪೂಜೆ ನಡೆಯುತ್ತಿತ್ತೆಂಬ ಮಾಹಿತಿ ದೊರಕಿತು. ಕಾಲಕ್ರಮೇಣ ಪೂಜೆ ನಿಂತುಹೋಗಿದೆಯೆಂದು ತಿಳಿಯಿತು.
ರುದ್ರಭೂಮಿಯೂ ಸಾನಿಧ್ಯದ ಪಕ್ಕದಲ್ಲಿತ್ತೆಂದು ಕಂಡು ಬಂತು. ಶಿವನಿಗೆ ಭಸ್ಮಾಭಿಷೇಕ ನಡೆಯುತ್ತಿತ್ತೆಂದು ತಿಳಿದುಬಂದಿದೆ. ಆದ್ದರಿಂದ ಈ ಸಾನಿಧ್ಯವನ್ನು ‘ಭಸ್ಮೇಶ್ವರ ಶಿವಸಾನಿಧ್ಯ’ ಎಂದು ಕರೆಯಲಾಗುತ್ತಿತ್ತೆಂದು ಜ್ಯೋತಿಷಿಗಳು ವಿವರಿಸಿದರು. ಜೊತೆಗೆ ಗಣಪತಿ, ಸುಬ್ರಹ್ಮಣ್ಯ, ಶಾಂತ ದುರ್ಗೆ ಹಾಗೂ ಸೂರ್ಯನಾರಾಯಣ ದೇವರ ಆರಾಧನೆಯೂ ನಡೆಯುತ್ತಿತ್ತೆಂದು ತಿಳಿಯಿತು. ಪರಿವಾರ ದೈವಗಳಾದ ನಾಗ ರಕ್ತೇಶ್ವರಿ, ಕಲ್ಲುರ್ಟಿ, ರಾಜ ಗುಳಿಗ ಹಾಗೂ ನಾಗ ದೇವತೆಗಳ ಸಾನಿಧ್ಯವೂ ಅಗತ್ಯವೆಂದು ಸೂಚಿಸಲಾಯಿತು.

ತೊಡಿಕಾನದಿಂದ ವರ್ಷಕ್ಕೊಮ್ಮೆ ನಾಗಪಟ್ಟಣ ಬಳಿ ಪಯಸ್ವಿನಿ ನದಿಯಲ್ಲಿ ತೇಲಿಕೊಂಡು ಮೀನುಗಳು ಬರುತಿದ್ದು ಇವುಗಳಿಗೆ ಊರವರು ಸೇರಿ ಅಕ್ಕಿ ಹಾಕುವ ಕ್ರಮವು ಹಿಂದೆಯೂ ನಡೆಯುತಿತ್ತೆಂದು ಕಂಡು ಬಂತು. ಆ ಮೀನುಗಳು ಶಿವಸಾನಿಧ್ಯವನ್ನು ಸುತ್ತಿ ಮತ್ತೆ ತೆರಳುತ್ತಿತ್ತೆಂಬ ನಂಬಿಕೆಯೂ ವ್ಯಕ್ತವಾಯಿತು. ಪ್ರಶ್ನಾಚಿಂತನೆಯ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸುತ್ತಿದ್ದರು. ನಿಮಿತ್ತಗಳನ್ನು ಜ್ಯೋತಿಷ್ಯರು ನೀಡುತಿದ್ದು ಹಿರಿಯರಿಂದ ಉತ್ತರವನ್ನು ಪಡೆಯಲಾಗಿತ್ತು.

ಈ ಎಲ್ಲಾ ಸಾನಿಧ್ಯ ಶಕ್ತಿಗಳಿಗೆ ಪುನಃ ಆರಾಧನೆ ಆರಂಭಿಸಿದರೆ ಗ್ರಾಮಕ್ಕೆ ಶ್ರೇಯಸ್ಸು ದೊರೆಯುತ್ತದೆ ಹಾಗೂ  ಸಮಸ್ಯೆಗಳು ಶಮನವಾಗುತ್ತವೆ ಎಂದು ಜ್ಯೋತಿಷಿಗಳು ಸಲಹೆ ನೀಡಿದರು. ಟ್ರಸ್ಟ್ ರಚಿಸಿ ತಂತ್ರಿಗಳು ಹಾಗೂ ವಾಸ್ತುಶಿಲ್ಪಿಗಳ ಮಾರ್ಗದರ್ಶನದಲ್ಲಿ ಮುಂದುವರಿಯುವಂತೆ ಸೂಚಿಸಿದರು.

35 ಸೆಂಟ್ಸ್ ಜಾಗ ನೀಡಲು ಮುಂದಾದ ಡಾ. ಗಿರೀಶ್ ಭಾರದ್ವಾಜ್…

ಪ್ರಶ್ನಾಚಿಂತನೆ ವೇಳೆ ಸಾನಿಧ್ಯ ನಿರ್ಮಾಣಕ್ಕೆ ಸುಮಾರು 35 ಸೆಂಟ್ಸ್ ಜಾಗ ಅಗತ್ಯವಿದೆ ಎಂದು ತಿಳಿದುಬಂದಿತು.  ಇದಕ್ಕೆ ಸ್ಪಂದಿಸಿದ ಡಾ. ಗಿರೀಶ್ ಭಾರದ್ವಾಜ್ ಅವರು ತಮ್ಮ ಸ್ವಂತ ಜಾಗದ ಒಂದು ಭಾಗವನ್ನು ದೇವಾಲಯ ನಿರ್ಮಾಣಕ್ಕೆ ಅರ್ಪಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಜ್ಯೋತಿಷಿಗಳನ್ನು ಆ ಜಾಗಕ್ಕೆ ಕರೆದುಕೊಂಡು ಹೋಗಿ ತೋರಿಸಲಾಯಿತು. ಜಾಗ ಪರಿಶೀಲಿಸಿದ ಜ್ಯೋತಿಷಿಗಳು ಅಲ್ಲಿ ದೈವಚೈತನ್ಯವಿದೆ ಎಂದು ತಿಳಿಸಿದರು.
ಮುಂದಿನ ಒಂದು ತಿಂಗಳೊಳಗೆ ನಿಮೃತ್ತಿ ಕಾರ್ಯಗಳು ಆರಂಭಗೊಳ್ಳಲಿದ್ದು, ತಂತ್ರಿಗಳು, ಸ್ವಾಮೀಜಿಗಳು ಮತ್ತು ವಾಸ್ತುಶಿಲ್ಪಿಗಳ ಮಾರ್ಗದರ್ಶನದಲ್ಲಿ ಕಾರ್ಯ ಮುಂದುವರಿಯಲಿದೆ. ಇದು ಸುತ್ತಮುತ್ತಲಿನ ಏಳು ಗ್ರಾಮಗಳಿಗೆ ಸಂಬಂಧಿಸಿದ ಕಾರ್ಯವಾಗಿರುವುದರಿಂದ ಸಾರ್ವಜನಿಕ ಸಹಕಾರದೊಂದಿಗೆ ಸುಗಮವಾಗಿ ನೆರವೇರುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.

whatsapp image 2026 02 23 at 5.49.57 pm

whatsapp image 2026 02 23 at 5.49.58 pm (1)

 

whatsapp image 2026 02 23 at 5.49.58 pm

Related Articles

Back to top button