ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು -ಎಂಸಿಎ ಸ್ನಾತಕೋತ್ತರ ವಿಭಾಗವನ್ನು ಉದ್ಘಾಟನೆ…

ಪುತ್ತೂರು: ಶಿಕ್ಷಣದ ಪ್ರತಿಯೊಂದು ವಿಭಾಗಕ್ಕೂ ಅದರದ್ದೇ ಆದ ಮಹತ್ವವಿದೆ ಒಂದು ಸಣ್ಣದು ಇನ್ನೊಂದು ದೊಡ್ಡದು ಅಂತೇನಿಲ್ಲ. ಅದರಿಂದ ನಮ್ಮ ಸಾಮರ್ಥ್ಯವನ್ನು ಹೇಗೆ ವೃದ್ದಿಸಿಕೊಳ್ಳುತ್ತೇವೆ ಎನ್ನುವುದರ ಮೂಲಕ ನಮ್ಮ ಭವಿಷ್ಯ ನಿರ್ಧರಿತವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಂಡ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಎರಡು ವರ್ಷಗಳ ಎಂಸಿಎ ಸ್ನಾತಕೋತ್ತರ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು. ಅವಕಾಶಗಳು ತನ್ನಿಂದ ತಾನೇ ಬರಲಾರದು ಕಲಿಕೆಗೆ ನಾವು ಯಾವರೀತಿ ಸ್ಪಂದಿಸುತ್ತೇವೆ, ಪ್ರಾಯೋಗಿಕವಾಗಿ ಎಷ್ಟು ಅನುಭವಗಳನ್ನು ಪಡೆಯುತ್ತೇವೆ ಮತ್ತು ಎಷ್ಟು ಮಟ್ಟಿಗೆ ಮಾನವೀಯ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳುತ್ತೇವೆ ಎನ್ನುವುದರ ಮೇಲೆ ಅವಕಾಶಗಳು ನಿರ್ಧರಿತವಾಗುತ್ತವೆ ಎಂದರು. ವಿವೇಕಾನಂದ ವಿದ್ಯಾವರ್ಧಕ ಸಂಘವೆಂಬ ಬೃಹತ್ ವೃಕ್ಷದ ಹೊಸ ಚಿಗುರುಗಳಾದ ನೀವು ಬಲಿತು ಸಾಕಷ್ಟು ಜನರಿಗೆ ನೆರಳನ್ನು ನೀಡುವಂತಾಗಲಿ ತನ್ಮೂಲಕ ಸಮಾಜಕ್ಕೂ ನಿಮ್ಮಿಂದ ಒಳಿತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ವರ್ಣೋದ್ಯಮಿ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ .ಜಿ.ಎಲ್ ಮಾತನಾಡಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಯಾವತ್ತಿಗೂ ಹಿನ್ನಡೆಯಾಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ತಂತ್ರಜ್ಞಾನದ ಹಿಂದೆ ಇದು ಹಾಸುಹೊಕ್ಕಾಗಿದೆ ಎಂದರು. ಈ ಕಂಪ್ಯೂಟರ್ ವಿಷಯದಲ್ಲಿ ಮಾಸ್ಟರ್‍ಗಳಾಗಲು ಆಗಮಿಸಿರುವ ನೀವು ಪೂರ್ಣ ಪ್ರಮಾಣದ ಸಾಧನೆಯ ಮೂಲಕ ಯಶಸ್ವೀ ತಂತ್ರಜ್ಞರಾಗಿ ಎಂದರು. ಸಂಸ್ಥೆಯ ಧ್ಯೇಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಿ ಸಮಾಜದ ಉನ್ನತಿಗೆ ಶ್ರಮಿಸಿ ಎಂದರು.
ಇನ್ನೋರ್ವ ಅತಿಥಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಜಿ.ಭಟ್ ಮಾತನಾಡಿ ಇದುವರೆಗೆ ಬಿಸಿಎ ಪದವಿಯ ನಂತರ ಮುಂದೇನು ಎನ್ನುವ ಪ್ರಶ್ನೆಯಿತ್ತು ಸ್ನಾತಕೋತ್ತರ ಪದವಿಗೆ ಎಲ್ಲೋ ಹೋಗಬೇಕಿತ್ತು ಅದಕ್ಕೆ ಪರಿಹಾರವಾಗಿ ಎಂಸಿಎ ವಿಭಾಗ ಇಲ್ಲೇ ಆರಂಭವಾಗಿದೆ ಎಂದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ಎಂಸಿಎ ಮಾಡುವುದು ಒಂದು ಅಪೂರ್ವ ಅವಕಾಶ ಎಂದು ಹೇಳಿದರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಇಲ್ಲಿನ ಒಳ್ಳೆಯ ವಿಛಾರಗಳನ್ನು ಇತರರಿಗೆ ತಿಳಿಸುತ್ತಾ ಸಂಸ್ಥೆಯ ಏಳಿಗೆಗೆ ಸಹಕರಿಸಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಯಾವ ವಿಷಯವೇ ಆಗಲಿ ಪೂರ್ತಿ ಪರಿಶ್ರಮಪಟ್ಟು ಕೆಲಸಮಾಡಿದಾಗ ಮಾತ್ರ ಯಶಸ್ಸು ಸಿಗಬಲ್ಲದು ಎಂದರು. 12 ವರ್ಷಗಳ ಶೈಕ್ಷಣಿಕ ಅನುಭವವಿರುವ ಪಿಎಚ್‍ಡಿ ಪದವೀಧರೆ ಡಾ.ವಂದನಾ.ಬಿ.ಎಸ್ ಎಂಸಿಎ ವಿಭಾಗದ ನಿರ್ದೇಶಕರಾಗಿರುತ್ತಾರೆ. ಅವರ ಸಮರ್ಥ ಸಾರಥ್ಯದಲ್ಲಿ ಅನುಭವೀ ಉಪನ್ಯಾಸಕ ವೃಂದವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಕಂಕಣಬದ್ಧವಾಗಿದೆ. ಸಂಪೂರ್ಣ ಹವಾನಿಯಂತ್ರಿತ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯಗಳು ಈಗಾಗಲೇ ಸಜ್ಜುಗೊಂಡಿವೆ ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಶಿಕ್ಷಣ ಸಂಸ್ಥೆಗಳನ್ನು ಅಳೆಯುವ ಮಾನದಂಡ ಅಲ್ಲಿನ ಶಿಕ್ಷಣದ ಗುಣಮಟ್ಟ ಮತ್ತು ನೇಮಕಾತಿ. ಇವೆರಡೂ ಕೂಡಾ ನಮ್ಮ ಸಂಸ್ಥೆಯಲ್ಲಿ ಉನ್ನತಮಟ್ಟದಲ್ಲಿದೆ ಎಂದರು. ಪ್ರತಿವರ್ಷ 60 ರಿಂದ 70 ಕಂಪೆನಿಗಳು ನೇಮಕಾತಿಗಾಗಿ ಕಾಲೇಜಿಗೆ ಭೇಟಿ ನಿಡುತ್ತವೆ, ಇದೇ ಕಂಪೆನಿಗಳು ಎಂಸಿಎ ಪದವೀಧರರನ್ನೂ ಕೂಡಾ ನೇಮಕಾತಿ ಮಾಡಿಕೊಳ್ಳುತ್ತವೆ ಎಂದರು.
ಅಂಕುರಂ ಎನ್ನುವ ವೇದಿಕೆಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿರುವ ಸಾಂಸ್ಕೃತಿಕ, ತಾಂತ್ರಿಕ ಹಾಗೂ ಇನ್ನಿತರ ಪಠ್ಯೇತರ ಪ್ರತಿಭೆಯನ್ನು ಪ್ರದರ್ಶಿಸಲು ಇದು ಅವಕಾಶ ಮಾಡಿಕೊಡಲಿದೆ.
ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ಪದವಿ ಕಾಲೇಜಿನ ಕಂಪ್ಯೂಟರ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಕಾಶ್.ಪಿ, ಇಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಎಂಸಿಎ ವಿಭಾಗದ ನೂತನ ವಿಧ್ಯಾರ್ಥಿಗಳು ಮತ್ತು ಪೋಷಕರು ಸಮಾರಂಭದಲ್ಲಿ ಹಾಜರಿದ್ದರು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್ ಸ್ವಾಗತಿಸಿ, ಪ್ರೊ.ಶೈಲೇಶ್.ಬಿ.ಸಿ ವಂದಿಸಿದರು. ಪ್ರೊ.ನೀಮಾ.ಎಚ್ ಮತ್ತು ಪ್ರೊ.ಅರ್ಪಣಾ.ಟಿ.ಜೆ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button