ಪುತ್ತೂರು ದಸರಾ ನಾಡಹಬ್ಬಕ್ಕೆ ಚಾಲನೆ:ಮಾತು ಮತ್ತು ಕೃತಿಯ ಮೂಲಕ ದೇಶದ ಸಾಮರಸ್ಯದ ಬದುಕು ನಿಂತಿದೆ-ಎ.ಸಿ. ಕೃಷ್ಣಮೂರ್ತಿ….
ಪುತ್ತೂರು: ಮಾತು ಮತ್ತು ಕೃತಿಯ ಮೂಲಕ ದೇಶದ ಸಾಮರಸ್ಯದ ಬದುಕು ನಿಂತಿದೆ. ಆ ಮೂಲಕ ವಿಶ್ವವನ್ನೇ ಗೆದ್ದು ತೋರಿಸಿದವರಿದ್ದಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಿಂದಾಗಿ ಇಂತಹ ಬದುಕಿಗೆ ವಿರುದ್ದವಾದ ಕಾರ್ಯಗಳು ನಡೆಯುತ್ತಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಹೆಚ್.ಕೆ. ಕೃಷ್ಣಮೂರ್ತಿ ಹೇಳಿದರು.
ಅವರು ಡಾ. ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ 67ನೇ ದಸರಾ ನಾಡಹಬ್ಬವನ್ನು ಭಾನುವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಾತು ಮತ್ತು ಕೃತಿಯ ಮೂಲಕ ಸಾಮಾರಸ್ಯದ ಬದುಕು ನಿಂತಾಗ ಅದನ್ನು ಸಾಮಾಜಿಕ ಜಾಲತಾಣದ ಒಂದು ಸಣ್ಣ ಮೆಸೇಜ್ ಮೂಲಕ ಉಲ್ಟ ಆಗುವ ಸಾಧ್ಯತೆ ಹೆಚ್ಚಾಗಿದೆ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಾಮಾಜಿಕ ಜಾಲತಾಣ ಬಳಸಿಕೊಳ್ಳಬೇಕು. ಹಿಂದೆ ಸಂತರು, ಸಾಧುಗಳು ಮಾತು ಕೃತಿಯಿಂದಲೇ ಜಾಗೃತಿ ಮೂಡಿಸಿದ್ದಾರೆ. ಈ ನಿಟ್ಟಿನಲ್ಲಿ ದಸರಾ ನಾಡಹಬ್ಬದಲ್ಲಿ ನಿತ್ಯ ಹೊಸ ಹೊಸ ವಿಚಾರಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿರುವ ಮೂಲಕ ಸಾಮರಸ್ಯದ ಬದುಕಿಗೆ ಹಬ್ಬಗಳು ಸಹಕಾರಿಯಾಗಿದೆ ಎಂದು ಸ್ಪಷ್ಟವಾಗುತ್ತದೆ ಎಂದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ವಿಷ್ಣುಪ್ರಸಾದ್ ಶುಭ ಹಾರೈಸಿದರು. ಸಮಿತಿಯ ಕೋಶಾಧಿಕಾರಿ ರಮೇಶ್ ಬಾಬು ಲೆಕ್ಕಪತ್ರ ಮಂಡಿಸಿದರು. ಪುತ್ತೂರು ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ಅವರು ಅತಿಥಿಗಳನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಸರಾ ನಾಡಹಬ್ಬದ ಸಮಿತಿ ಅಧ್ಯಕ್ಷ ವಾಟೆಡ್ಕ ಕ್ರಷ್ಣ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಟಿ.ಜಯರಾಮ್ ಭಟ್ ವಂದಿಸಿದರು. ಭಾಸ್ಕರ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಗಣರಾಜ ಕುಂಬ್ಳೆ ವ್ಯಾಖ್ಯಾನದ, ಚಂದ್ರಶೇಖರ್ ಕೆದಿಲಾಯ ಅವರ ವಾಚನದಲ್ಲಿ ಗಮಕ ಕಾರ್ಯಕ್ರಮ ನಡೆಯಿತು.