ಅ.1: ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರ `ಕಲ್ಪಲತಾ’ ಕೃತಿ ಲೋಕಾರ್ಪಣೆ….
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಮಾನವಿಕ ವಿಭಾಗಗಳು, ಐಕ್ಯುಎಸಿ ಘಟಕ, ಕನ್ನಡ ಸಂಘ, ನೇಚರ್ ಕ್ಲಬ್ ಹಾಗೂ ಸ್ನಾತಕೋತ್ತರ ವಿಭಾಗಗಳ ಸಹಯೋಗದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಬರೆದ ‘ಕಲ್ಪಲತಾ’ ಸಾಂಪ್ರದಾಯಿಕ ಔಷಧಗಳ ಕೃತಿ ಲೋಕಾರ್ಪಣಾ ಸಮಾರಂಭ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಅ.1ರಂದು ಅಪರಾಹ್ನ ನಡೆಯಲಿದೆ.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ.ಜಯರಾಮ ಭಟ್, ನಿವೃತ್ತ ಪ್ರಾಧ್ಯಾಪಕರಾದ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಡಬದ ಆಯುರ್ವೇದ ವೈದ್ಯ ಡಾ. ಸುರೇಶ್ ಕೂಡೂರು ಕೃತಿ ಪರಿಚಯ ನಡೆಸಲಿದ್ದಾರೆ.
ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರ ಸುಮಾರು 450 ಕ್ಕೂ ಅಧಿಕ ಲೇಖನಗಳು, ಅಸಂಖ್ಯ ಸಂಶೋಧನಾ ಬರಹಗಳು ರಾಜ್ಯ ರಾಷ್ಟ್ರದ ಪತ್ರಿಕೆಗಳಲ್ಲಿ ಹಾಗೂ ಸಂಶೋಧನಾ ಗ್ರಂಥಗಳಲ್ಲಿ ಪ್ರಕಟಗೊಂಡಿವೆ. ಡಾ.ಪೀಟರ್ ಅವರು ಹಂಪಿ ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಪಿಎಚ್.ಡಿ. ಹಾಗೂ ಎಂ.ಫಿಲ್. ಸಂಶೋಧನಾ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
1983ರಿಂದಲೇ ಬರವಣಿಗೆಯತ್ತ ಆಸಕ್ತಿ ತಾಳಿ, ಅಂಕಣಕಾರನಾಗಿ, ಲೇಖಕನಾಗಿ ಬೆಳೆದು ಬಂದಿರುವ ಡಾ.ಪೀಟರ್ ಅವರು, ಬಾಸೆಲ್ ಮಿಷನ್ ಇನ್ ಸೌತ್ ಕೆನರಾ ಎಂಬ ವಿಷಯದ ಬಗೆಗೆ ಸಂಶೋಧನೆ ನಡೆಸಿ 1988ರಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 2018ರ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕ ಎಂಬ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.