ಕನ್ನಡ ಸಾಹಿತ್ಯಾಭಿರುಚಿ ವೃದ್ಧಿಸಲು ಇನ್ನಷ್ಟು ಕಾರ್ಯಕ್ರಮಗಳ ಆಯೋಜನೆ- ಡಾ. ಎಂ. ಪಿ. ಶ್ರೀನಾಥ…

ಬಂಟ್ವಾಳ: ದ. ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯು ಬಿ. ಸಿ. ರೋಡ್ ನಲ್ಲಿರುವ ಜೋಡುಮಾರ್ಗದ ಕನ್ನಡ ಭವನದಲ್ಲಿ ಜು 9 ರಂದು ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕ. ಸಾ. ಪ.ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ವಹಿಸಿದ್ದು, ಪರಿಷತ್ತಿನ ಚಟುವಟಿಕೆಗಳ ಪರಾಮರ್ಶೆ ನಡೆಸಿದರು. ತದನಂತರ ತುಮಕೂರಿನಲ್ಲಿ ನಡೆದ ಕೇಂದ್ರ ಕಾರ್ಯಕಾರಿ ಸಮಿತಿ ಯ ಸಭೆಯ ಮಾಹಿತಿ ನೀಡಿದರು. ಸದಸ್ಯತ್ವ ಅಭಿಯಾನ ಮತ್ತು ಹೋಬಳಿ ರಚನೆಯ ಬಗ್ಗೆ ಸಭೆಯಲ್ಲಿ ಒತ್ತು ನೀಡಲಾಯಿತು. ನಿಧನ ಹೊಂದಿದ ಸದಸ್ಯರ ಮಾಹಿತಿ ಸಂಗ್ರಹ, ಒಂದು ದಿನದ ಗಡಿನಾಡ ಉತ್ಸವ ಏರ್ಪಾಡು, ಪರಿಷತ್ತಿನ ಡೈರೆಕ್ಟರಿಗೆ ಮಾಹಿತಿ ಸಂಗ್ರಹ, ಹಿರಿಯ ಸಾಹಿತಿಗಳ ಮನೆ ಭೇಟಿ, ಪ್ರಣಾಳಿಕೆಯಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಶಾಲಾ ಕಾಲೇಜುಗಳಲ್ಲಿ ಕನ್ನಡ ಕಾರ್ಯಕ್ರಮಗಳು ನಿರಂತರವಾಗಿ ಏರ್ಪಡಿಸಲಾಗಿದ್ದು ಜಿಲ್ಲೆಯಾದ್ಯಂತ 250 ಕ್ಕೂ ಹೆಚ್ಚು ಪರಿಷತ್ತಿನ ಕಾರ್ಯಕ್ರಮ ಗಳು ನಡೆಸಿದ್ದರ ಬಗ್ಗೆ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿಬಂಟ್ವಾಳ ಕ. ಸಾ. ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪುತ್ತೂರು ಕ. ಸಾ. ಪ. ಅಧ್ಯಕ್ಷ ಉಮೇಶ್ ನಾಯಕ್, ಮಂಗಳೂರು ಕ. ಸಾ. ಪ. ಅಧ್ಯಕ್ಷ ಮಂಜುನಾಥ್ ರೇವಣಕರ್, ಮೂಲ್ಕಿ ಕ. ಸಾ. ಪ. ಅಧ್ಯಕ್ಷ ಮಿಥುನ್ ಉಡುಪ, ಮೂಡಬಿದ್ರೆ ಕ. ಸಾ. ಪ. ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಕಡಬ ಕ. ಸಾ. ಪ. ಅಧ್ಯಕ್ಷ ಸೇಸಪ್ಪ ರೈ,ಸುಳ್ಯ ಕ. ಸಾ. ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು,ಜಿಲ್ಲಾ ಕ. ಸಾ. ಪ. ಪದಾಧಿಕಾರಿಗಳಾದ ಚಂದ್ರಹಾಸ ಶೆಟ್ಟಿ, ಯು. ಎಚ್. ಖಾಲಿದ್ ಉಜಿರೆ, ಕಿರಣ್ ಪ್ರಸಾದ್ ರೈ , ಕಾರ್ಯಕಾರಿಣಿಯ ಸದಸ್ಯರಾದ ಪೂವಪ್ಪ ನೆರಳಕಟ್ಟೆ, ರಾಮಚಂದ್ರ ಪಳ್ಳತಡ್ಕ, ಸುಂದರ ನಾಯ್ಕ್ ಭಾಗವಹಿಸಿದ್ದರು.
ಜಿಲ್ಲಾ ಗೌರವ ಕಾರ್ಯದರ್ಶಿ ಎಂ. ರಾಜೇಶ್ವರಿ ಸ್ವಾಗತಿಸಿ ವರದಿ ಸಲ್ಲಿಸಿದರು. ಗೌರವ ಕೋಶಾಧಿಕಾರಿ ಬಿ.ಐತಪ್ಪ ನಾಯ್ಕ್ ವಂದಿಸಿದರು.

Sponsors

Related Articles

Back to top button