ವಿವೇಕಾನಂದ ಎಂಸಿಜೆ ವಿಭಾಗದಿಂದ `ಜನಮನ’ ಕಾರ್ಯಕ್ರಮ-ಸೇನೆಯ ಸೇವೆ ಶ್ರೇಷ್ಠವಾದದ್ದು : ರಮೇಶ್ ಬಾಬು….
ಪುತ್ತೂರು : ನಾವೆಲ್ಲರೂ ಭಾರತದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು. ಅದೇ ರೀತಿ ನಮ್ಮ ಸೈನ್ಯದ ಸೇವೆಯನ್ನು ಸ್ಮರಿಸಬೇಕು. ಏಕೆಂದರೆ ಅವರ ರಕ್ಷಣೆಯನ್ನು ಮಾಡಿಕೊಂಡು ದೇಶ ರಕ್ಷಣೆಯನ್ನು ಮಾಡುತ್ತಾರೆ. ಇನ್ನು ಕೆಲವು ಸಂದರ್ಭ ದೇಶದ ಒಳಗಿನ ದಂಗೆ ಮತ್ತು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸೇನೆಯು ನೀಡುವ ಸೇವೆ ಸರ್ವಶ್ರೇಷ್ಠವಾಗಿದೆ ಎಂದು ನಿವೃತ್ತ ಸೇನಾಧಿಕಾರಿ ರಮೇಶ್ ಬಾಬು ಹೇಳಿದರು.
ಅವರು ಮಂಗಳವಾರ ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ `ಜನ ಮನ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸೈನಿಕರು ಕಾಶ್ಮೀರದಂತಹ ಪ್ರದೇಶದಲ್ಲಿ ತಮಗೆ ಯಾವುದೇ ಸಂಬಂಧವಿಲ್ಲದಿದ್ದರೂ ದೇಶ ಕಾಪಾಡಲು ಇಪ್ಪತ್ತನಾಲ್ಕು ಗಂಟೆ ಸೇವೆಯನ್ನು ಮಾಡುತ್ತಾರೆ.ಇಲ್ಲಿ ಧರ್ಮ, ಜಾತಿ, ಪಂಗಡಗಳು ಎಂಬ ಭೇದಭಾವವಿಲ್ಲ. ರಾಷ್ಟ್ರ ಧ್ವಜದ ಮುಂದೆ ಎಲ್ಲಾ ಧರ್ಮಗಳು ಸಮಾನ. ಸೈನಿಕರು ತಮ್ಮ ವೈಯಕ್ತಿಕ ವಿಷಯವನ್ನು ಬದಿಗಿಟ್ಟು ದೇಶಕ್ಕೋಸ್ಕರ ಸೇನೆಯಲ್ಲಿ ದುಡಿಯುತ್ತಾರೆ ಇದು ನಿಜವಾದ ದೇಶಪ್ರೇಮ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ. ಎಚ್.ಜಿ. ಶ್ರೀಧರ ಮಾತನಾಡಿ, ಸೈನ್ಯದ ಜಗತ್ತು ಬೇರೆ ಏಕೆಂದರೆ ಅಲ್ಲಿ ಎದುರಾಳಿಗಳನ್ನು ಎದುರಿಸಿ ದೇಶಕ್ಕೆ ರಕ್ಷಣೆಯನ್ನು ನೀಡುವ ಕೆಲಸವನ್ನು ಸೇವೆಯ ರೂಪದಲ್ಲಿ ಮಾಡುತ್ತಾರೆ. ಹಾಗಾಗಿ ಇಲ್ಲಿ ಸೇವೆಯನ್ನು ಸಲ್ಲಿಸುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂದರ್ಭ ಉಪನ್ಯಾಸಕಿ ಸುಷ್ಮಿತಾ ಜೆ., ರಾಧಿಕಾ ಕಾನತ್ತಡ್ಕ, ಉಪನ್ಯಾಸಕ ಭರತ್‍ರಾಜ್ ಕರ್ತಡ್ಕ ಉಪಸ್ಥಿತರಿದ್ದರು.
ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ ಪ್ರಾಸ್ತಾವಿಸಿದರು. ಉಪನ್ಯಾಸಕಿ ಪ್ರಜ್ಞಾ ಬಾರ್ಯ ವಂದಿಸಿ, ವಿದ್ರ್ಯಾಥಿನಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.