ಲಾಕ್‍ಡೌನ್‍ – ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ವಿವಿಧ ಚಟುವಟಿಕೆಗಳು….

ಪುತ್ತೂರು: ಲಾಕ್‍ಡೌನ್‍ನ ಪರಿಣಾಮವು ದೇಶದೆಲ್ಲೆಡೆ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಅಡ್ಡಿಯಾಗಿದ್ದರೂ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನಿರಂತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರದ ವರ್ಕ್ ಫ್ರಂ ಹೋಂ ನೀತಿಯಂತೆ ಮನೆಯಲ್ಲೇ ಇದ್ದು ವಿವಿಧ ಸಮಾಜಮುಖೀ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ ಅವರ ಯೋಚನೆಯಂತೆ ಕಾಲೇಜಿನ ಪ್ರಾಧ್ಯಾಪಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ತಂಡವು ಕಡಿಮೆ ವೆಚ್ಚದ ಕೃತಕ ಉಸಿರಾಟದ ಸಾಧನ ವಿವೇಕ ‘ಜೀವವರ್ಧಕ’ವನ್ನು ಅಭಿವೃದ್ಧಿಪಡಿಸಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಹಿರಿಯ ವೈದ್ಯಾಧಿಕಾರಿಗಳು ಇದರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
ಕಾಲೇಜಿನ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ವಿಷ್ಣು ಇವರು ಎಲ್ಲಾ ದಿನಪತ್ರಿಕೆಯನ್ನು ಓದಬಹುದಾದ ಮೊಬೈಲ್ ಆಪ್ ಒಂದನ್ನು ಅಭಿವೃದ್ಧಿ ಪಡಿಸಿದ್ದು ಇದರ ಮೂಲಕ ಯಾವುದೇ ಭಾಷೆಯ ದಿನಪತ್ರಿಕೆಯನ್ನು ಓದುವುದಕ್ಕೆ ಅವಕಾಶವಿದೆ. ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಇದು ಪತ್ರಿಕಾ ಓದುಗರಿಗೆ ತುಂಬ ಸಹಕಾರಿಯಾಗಿತ್ತು ಮತ್ತು ಹಸಿರು ಪರಿಸರ ಪರಿಕಲ್ಪನೆಗೆ ಪೂರಕವಾಗಿ ಪೇಪರ್ ಉಳಿಕೆಗೂ ಸಹಕಾರಿಯಾಗಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಬೆಳಗಾವಿ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು, ನವದೆಹಲಿ ಇದರ ಮಾರ್ಗದರ್ಶನದಂತೆ ಬೋಧಕರು ಪ್ರತಿದಿನ ಆನ್‍ಲೈನ್ ತರಗತಿಗಳನ್ನು ನಡೆಸುತ್ತಿದ್ದಾರೆ. ಕಾಲೇಜಿನ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ದೈನಂದಿನ ನಿಗದಿತ ಪಠ್ಯಕ್ರಮದಂತೆ ಬೆಳಗ್ಗಿನಿಂದ ಸಂಜೆಯವರೆಗೆ ಆನ್‍ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ವಿಭಾಗ ಮುಖ್ಯಸ್ಥರ ನಿರ್ದೇಶನದಂತೆ ಎಲ್ಲಾ ಉಪನ್ಯಾಸಕರು ಆನ್‍ಲೈನ್ ತರಗತಿ, ಪ್ರಶ್ನಾಕೋಶಗಳ ರವಾನೆ, ಅಸೈನ್‍ಮೆಂಟ್, ನೋಟ್ಸ್, ಕಲಿಕಾ ಸಾಮಗ್ರಿಗಳ ರವಾನೆಯ ಜತೆಯಲ್ಲಿ ವಿದ್ಯಾರ್ಥಿಗಳ ಪ್ರಾಜೆಕ್ಟ್‍ವರ್ಕ್‍ಗಳ ಮೌಲ್ಯಮಾಪನವನ್ನೂ ನಡೆಸುತ್ತಿದ್ದಾರೆ. ವಿಶ್ವವಿದ್ಯಾನಿಲಯದ ಸೂಚನೆಯ ಪ್ರಕಾರ ಆಂತರಿಕ ಪರೀಕ್ಷೆಗಳನ್ನೂ ಆನ್‍ಲೈನ್ ಮೂಲಕ ನಡೆಸಲಾಗಿದೆ. ಕಾರಣಾಂತರದಿಂದ ಆನ್‍ಲೈನ್ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಮೂಡಲ್‍ನಲ್ಲಿ ಪಾಠ ಮತ್ತು ನೋಟ್ಸ್‍ಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ ಅಲ್ಲದೆ ವಿಡೀಯೋಗಳನ್ನು ಮಾಡಿ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತಿದೆ. ಇದರಿಂದ ತರಗತಿಗಳ ಮರುವೀಕ್ಷಣೆಯೂ ಸಾಧ್ಯವಾಗುತ್ತದೆ. ಕಾಲೇಜಿನ ವೆಬ್‍ಸೈಟ್‍ನಲ್ಲಿಯೂ ಈ ವಿಡಿಯೋಗಳನ್ನು ಅಳವಡಿಸಲಾಗಿದೆ.
ಪ್ರತಿ ವಿದ್ಯಾರ್ಥಿ ಮತ್ತು ಅವರ ಹೆತ್ತವರೊಂದಿಗೆ ಶೈಕ್ಷಣಿಕ ಸಲಹೆಗಾರರು ಮತ್ತು ಮಾರ್ಗದರ್ಶಕರು ನಿರಂತರ ಸಂಪರ್ಕವನ್ನು ಹೊಂದಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯಕ್ತಿಕ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಕಾರ್ಯವೂ ನಡೆಯುತ್ತಿದೆ.
ಸರ್ಕಾರದ ಸೂಚನೆಯಂತೆ ಕಾಲೇಜಿನಲ್ಲಿ ಸೂಕ್ತ ಸುರಕ್ಷತೆ ಮತ್ತು ಆರೋಗ್ಯ ತಪಾಸಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವೇಶ ದ್ವಾರದಲ್ಲಿ ಸಾನಿಟೈಸರ್ ಇರಿಸಲಾಗಿದೆ ಮತ್ತು ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button