ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಇಂದಿರಾಗಾಂಧಿ ಯವರ ಪುಣ್ಯಸ್ಮರಣೆ…
ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಕಾಂಗ್ರೆಸ್ ಸಮಿತಿ ಗ್ರಾಮ ಪಂಚಾಯತ್ ಚುನಾವಣೆ ಉಸ್ತುವಾರಿಗಳ ಮತ್ತು ಗ್ರಾಮ ಅಧ್ಯಕ್ಷರುಗಳು, ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕರ ಸಭೆಯನ್ನು ಇಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಜಯಪ್ರಕಾಶ್ ರೈ ಎನ್ ರವರು ವಹಿಸಿದ್ದರು. ಇಂದಿರಾಗಾಂಧಿ ಪುಣ್ಯಸ್ಮರಣೆಯ ಅಂಗವಾಗಿ ನುಡಿ ನಮನವನ್ನು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಅರ್ಪಿಸಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಇಸ್ರೋ, ಅಣು ವಿಜ್ಞಾನ, ಬ್ಯಾಂಕ್ ರಾಷ್ಟ್ರೀಕರಣ ಮುಂತಾದ ಯೋಜನೆಗಳನ್ನು ಜಾರಿಗೆ ತಂದು ದುಡಿಯುವ ನೌಕರ, ಕಾರ್ಮಿಕರ ವೈಯಕ್ತಿಕ ಬದುಕನ್ನು ಹಾಗೂ ಬಡತನವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟರು. ಅಲ್ಲದೆ ಅವರ ವೈಯಕ್ತಿಕ ಬದುಕನ್ನು ರಾಷ್ಟ್ರಕ್ಕಾಗಿ ಮುಡುಪಾಗಿಟ್ಟರು. ಇಂದು ಅವರ ತ್ಯಾಗ ಬಲಿದಾನ ಆದರ್ಶ ತಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ಸಂವಿಧಾನವನ್ನು ಉಳಿಸುವ ಸಲುವಾಗಿ ಅವರು ಕೈಗೊಂಡ ತುರ್ತು ಪರಿಸ್ಥಿತಿ ಹೇರಿಕೆಯನ್ನು ನಾವೆಲ್ಲರೂ ಸಮರ್ಥಿಸಿಕೊಳ್ಳ ಬೇಕಾಗಿದೆ ಎಂದು ನುಡಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪಗೌಡ, ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ-ಸಂಸ್ಕೃತಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಜಯರಾಮ್ ಪಿ ಸಿ ನುಡಿನಮನ ಸಲ್ಲಿಸಿದರು. ಕಾಂಗ್ರೆಸ್ ಸೇವದಳ ತಾಲೂಕು ಸಮಿತಿ ರಚಿಸುವ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಬೂತ್ ಮಟ್ಟದಿಂದ ಇಬ್ಬರು ಕಾರ್ಯಕರ್ತರನ್ನು ಸೇವಾದಳ ಸದಸ್ಯರನ್ನಾಗಿ ಆಯ್ಕೆಗೊಳಿಸಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಮತ್ತು ತಾಲೂಕು ಸಮಿತಿಗೆ ಕಳುಹಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ಗೋಕುಲ್ ದಾಸ್ ಕೆ ಸಲಹೆ ನೀಡಿದರು.
ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ್ ಎಂ ಜೆ ಮಾಹಿತಿ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಜಯಪ್ರಕಾಶ್ ರೈ ಅವರು, ಗ್ರಾಮ ಪಂಚಾಯತ್ ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಉಸ್ತುವಾರಿಗಳು, ಗ್ರಾಮ ಅಧ್ಯಕ್ಷರು, ಗ್ರಾಮ ಮಟ್ಟದಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಸಭೆಯನ್ನು ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆಗೆ ತಯಾರಾಗುವಂತೆ ಸೂಚನೆ ನೀಡಿದರು.
ವೇದಿಕೆಯಲ್ಲಿ ಮಾಜಿ ನಗರ ಪಂಚಾಯತ್ ಅಧ್ಯಕ್ಷರಾದ ಸಂಶುದ್ದೀನ್ ಎಸ್, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಜರಾಮ ಭಟ್ ಬೆಟ್ಟ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಉಸ್ತುವಾರಿ ಗಳು, ಗ್ರಾಮ ಅಧ್ಯಕ್ಷರು ಹಾಗೂ ಸಾಮಾಜಿಕ ಜಾಲತಾಣ ಸಂಯೋಜಕರು ಭಾಗವಹಿಸಿದ್ದರು.