ಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಆಮಂತ್ರಣ ಪತ್ರಿಕೆ ಬಿಡುಗಡೆ…
ತಾಳಮದ್ದಳೆ ವಿಚಾರ ಪ್ರಚೋದಕ ಕಲಾ ಪ್ರಕಾರ: ಡಾ.ಎ.ಜೆ.ಶೆಟ್ಟಿ...
ಮಂಗಳೂರು: ‘ಮನೋರಂಜನೆಯೊಂದಿಗೆ ವಿವಿಧ ಭಾರತೀಯ ಜ್ಞಾನಶಾಖೆಗಳನ್ನು ಪರಿಚಯಿಸುವ ಯಕ್ಷಗಾನ ತಾಳಮದ್ದಳೆ ಬಹಳ ವಿಚಾರ ಪ್ರಚೋದಕವಾದ ಕಲಾ ಪ್ರಕಾರ. ಪ್ರತಿ ವರ್ಷ ಸಪ್ತಾಹದ ರೂಪದಲ್ಲಿ ಇದನ್ನು ನವೆಂಬರ ತಿಂಗಳ ನುಡಿ ಹಬ್ಬವಾಗಿ ಆಚರಿಸುತ್ತಿರುವ ಯಕ್ಷಾಂಗಣದ ಕಾರ್ಯವನ್ನು ಕಲಾಭಿಮಾನಿಗಳು ಬೆಂಬಲಿಸಬೇಕು’ ಎಂದು ಎಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಯಕ್ಷಾಂಗಣದ ಗೌರವಾಧ್ಯಕ್ಷ ಡಾ.ಎ.ಜೆ. ಶೆಟ್ಟಿ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಹನ್ನೆರಡನೇ ವರ್ಷದ ನುಡಿ ಹಬ್ಬ ದ್ವಾದಶ ಸರಣಿಯ ಆಮಂತ್ರಣ ಪತ್ರಿಕೆಯನ್ನು ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಹೇಶ್ ಮೋಟರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಮತ್ತು ಉದ್ಯಮಿ, ಲೋಟಸ್ ಬಿಲ್ಡರ್ಸ್ ನ ಜಿತೇಂದ್ರ ಕೊಟ್ಟಾರಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಸಂಘಟನಾ ಪರ್ವ:
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಕದ್ರಿ ದೇವಾಲಯದ ರಾಜಾಂಗಣದಲ್ಲಿ 2024 ನವೆಂಬರ 11ರಿಂದ 17ರವರೆಗೆ ಜಿಲ್ಲೆಯ ವಿವಿಧ ಕಲಾಸಂಘಗಳ ಸಹಕಾರದಿಂದ ನಡೆಯುವ ಈ ಬಾರಿಯ ಸಪ್ತಾಹವನ್ನು ಸಂಘಟನಾ ಪರ್ವ ಎಂದು ಕರೆಯಲಾಗಿದೆ’ ಎಂದರು. ‘ಹವ್ಯಾಸಿ ಬಳಗ ಕದ್ರಿ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ, ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ, ಶ್ರೀ ವಾಣೀವಿಲಾಸ ಯಕ್ಷ ಬಳಗ ಕಟೀಲು, ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ, ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಕನ್ಯಾನ, ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಂಘಗಳು ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳ ಸೇರ್ಪಡೆಯೊಂದಿಗೆ ಏಳು ದಿನದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಕೈಜೋಡಿಸಿವೆ’ ಎಂದವರು ತಿಳಿಸಿದರು.
ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕರಾದ ರವೀಂದ್ರ ರೈ ಕಲ್ಲಿಮಾರು, ನಿವೇದಿತಾ ಎನ್. ಶೆಟ್ಟಿ; ಕಾರ್ಯದರ್ಶಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್ ಮತ್ತು ದೇವಸ್ಥಾನದ ನಿಕಟ ಪೂರ್ವ ಟ್ರಸ್ಟಿ ಸುರೇಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಕಾರ್ಯಕಾರಿಣಿ ಸದಸ್ಯ ಸುಧಾಕರ ರಾವ್ ಪೇಜಾವರ ವಂದಿಸಿದರು.