ಚತುಃಸಂಹಿತಾ ಯಾಗ: ಸಾಮವೇದ ಹವನ ಸಂಪನ್ನ…

ಗೋಕರ್ಣ: ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸ್ವಭಾಷಾ ಚಾತುರ್ಮಾಸ್ಯದ ಸಂದರ್ಭದಲ್ಲಿ ಅಶೋಕೆಯ ಶೋಭಾಭವನದಲ್ಲಿ ಮಂಗಳವಾರ ಲೋಕಕ್ಷೇಮ, ಸಮಸ್ತ ಸಮಾಜದ ಅಭ್ಯುದಯ ಮತ್ತು ಆಸ್ತಿಕರಿಗೆ ಪುಣ್ಯ ಸಂಪಾದನೆ ಉದ್ದೇಶದಿಂದ ಅಪರೂಪದ ಚತುಃಸಂಹಿತಾ ಯಾಗ ಶ್ರೀಗಳ ಸಾನ್ನಿಧ್ಯದಲ್ಲಿ ಸಂಪನ್ನಗೊಂಡಿದೆ.
ಮಂಗಳವಾರ ಸಾಮವೇದ ಸಂಹಿತಾ ಯಾಗದ ಪೂರ್ಣಾಹುತಿಯಲ್ಲಿ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಪಾಲ್ಗೊಂಡು ಭಕ್ತರನ್ನು ಹರಿಸಿದರು.
ಚತುಃಸಂಹಿತಾ ಯಾಗದ ಋಗ್‍ಸಂಹಿತಾ ಮತ್ತು ಯಜುರ್‍ಸಂಹಿತಾ ಯಾಗಗಳು ಈಗಾಗಲೇ ಸಂಪನ್ನಗೊಂಡಿದ್ದು, ಮಂಗಳವಾರ ಸಾಮಸಂಹಿತಾ ಯಾಗ ಪೂರ್ಣಗೊಂಡಿತು. 29 ರಿಂದ ಅಥರ್ವಸಂಹಿತಾ ಯಾಗ ನಡೆಯಲಿದೆ.
ಸನ್ಮಾರ್ಗದಲ್ಲಿ ನಡೆಯುವ ವಿಪ್ರರಿಗೆ ಸಂಪತ್ತು ಎನಿಸಿದ ವೇದಗಳನ್ನು ಉಳಿಸುವ ಉದ್ದೇಶದಿಂದ ಈ ಅತ್ಯಪೂರ್ವ ಎನಿಸಿದ ಚತುಃಸಂಹಿತಾ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ವೇದಾಧ್ಯಯನ, ಪ್ರತಿದಿನ ವೇದ ಅಭ್ಯಾಸ, ನಿತ್ಯಾನುಷ್ಠಾನ ಮಾಡುವಂತೆ ಶ್ರೀಶಂಕರರು ಸೂಚಿಸಿದ್ದು, ಈ ಮಂತ್ರಸಂಪತ್ತಿನಿಂದಲೇ ಶ್ರೇಯಸ್ಸು ಹಾಗೂ ಇದು ಮೋಕ್ಷಕ್ಕೆ ದಾರಿ. ಇಂಥ ಅಮೂಲ್ಯ ವೇದಸಂಪತ್ತಿನ ಶ್ರವಣ ಮತ್ತು ಚತುಃಸಂಹಿತಾ ಯಾಗದಲ್ಲಿ ಪಾಲ್ಗೊಳ್ಳುವುದು ಕೂಡಾ ಅತಿಶಯ ಪುಣ್ಯವನ್ನು ತಂದುಕೊಡುವಂಥದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಈ ಯಾಗವನ್ನು ಹಮ್ಮಿಕೊಳ್ಳಲಾಗಿತ್ತು.
ವಿಪ್ರರಿಗೆ ವೇದವೇ ಸಂಪತ್ತು; ಆದರೆ ಆಧುನಿಕ ಜಗತ್ತಿನಲ್ಲಿ ಭೌತಿಕ ಸಂಪತ್ತನ್ನು ಅರಸಿ ಧರ್ಮಮಾರ್ಗವನ್ನು ಮನುಷ್ಯ ಮರೆತಿದ್ದಾನೆ. ಮನುಕುಲದ ಉಳಿವಿಗಾಗಿ ವೇದಸಂಪತ್ತಿನ ಸಂರಕ್ಷಣೆ ಅಗತ್ಯ. ವೇದಾಧ್ಯಯನ ಮಾಡಲು ಸಾಧ್ಯವಾಗದಿದ್ದರೆ
ವೇದ ಮಂತ್ರ ಅನುಷ್ಠಾನದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರೂ ಇಷ್ಟಪ್ರಾಪ್ತಿಯಾಗುತ್ತದೆ ಎಂದು ಶ್ರೀಮಠದ ಶಾಸ್ತ್ರಿಗಳಾದ ಸುಚೇತನ ಶಾಸ್ತ್ರಿ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯಕ, ಎಸ್.ಕೆ.ಭಾಗ್ವತ್, ವಿನಾಯಕ ಕಲಗಾರು, ಕಲಾವಿದ ಶಿವರಾಮ ಹೆಗಡೆ ಕೆರೆಮನೆ ಅವರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ರಾಜ್ಯದ ಖ್ಯಾತ ವೈದ್ಯ ಡಾ.ಗಿರಿಧರ ಕಜೆ ಕುಟುಂಬದವರು ಸರ್ವಸೇವೆ ನೆರವೇರಿಸಿದರು.

whatsapp image 2025 08 26 at 5.41.13 pm

whatsapp image 2025 08 26 at 5.41.13 pm (1)

whatsapp image 2025 08 26 at 5.41.13 pm (3)

Related Articles

Back to top button