ತುಳುವ ಮಹಾಸಭಾದಿಂದ ‘ಬೀರದ ಬೊಲ್ಪು’ ಕಾವ್ಯ ಯಾನ…
ಮಂದಾರ ಕಾವ್ಯದಲ್ಲಿ ತುಳು ಸಂಸ್ಕೃತಿ ಅನಾವರಣ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ...

ಮೂಡುಬಿದಿರೆ: ‘ಮಂದಾರ ಕೇಶವ ಭಟ್ಟರು ತುಳು ಸಂಸ್ಕೃತಿ ಮತ್ತು ಪರಂಪರೆಯ ಸೊಗಡನ್ನು ತಮ್ಮ ಕಾವ್ಯದಲ್ಲಿ ಎಳೆ ಎಳೆಯಾಗಿ ಚಿತ್ರಿಸಿದ್ದಾರೆ. ಕಾವ್ಯಯಾನದಂತಹ ಜನಪ್ರಿಯ ಮಾಧ್ಯಮದ ಮೂಲಕ ಅದು ಸಾರ್ವಜನಿಕವಾಗಿ ಅನಾವರಣಗೊಳ್ಳುತ್ತಿದೆ. ಕಾವ್ಯವು ಸಂಗೀತದೊಡನೆ ಸೇರಿ ಕಲಾ ರಸಿಕರಿಗೆ ವಿಶೇಷ ಅನುಭೂತಿ ನೀಡುತ್ತದೆ’ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.
ತುಳುವ ಮಹಾಸಭೆ ಮೂಡುಬಿದಿರೆ, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ಮಂದಾರ ಪ್ರತಿಷ್ಠಾನ ಮಂಗಳೂರು, ತುಳು ಕೂಟ ಬೆದ್ರ ಸಹಯೋಗದಲ್ಲಿ ಮೂಡುಬಿದಿರೆ ಜೈನಮಠದಲ್ಲಿ ಭಾನುವಾರ ಜರಗಿದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ‘ಬೀರದ ಬೊಲ್ಪು’ ಕಾವ್ಯಯಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ಮಂದಾರ ರಾಜೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕಾವ್ಯಯಾನ: ಸುಗಿಪು – ದುನಿಪು
ಶ್ರೀಕೃಷ್ಣನ ಬಾಲಲೀಲೆಯ ಕುರಿತಾದ ‘ಬೀರದ ಬೊಲ್ಪು’ ತುಳು ಕಾವ್ಯದ ಸುಗಿಪು – ದುನಿಪು (ವಾಚನ – ಪ್ರವಚನ) ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನಕಾರರಾಗಿ ಭಾಗವಹಿಸಿದ್ದರು. ಯಕ್ಷಗಾನ ಭಾಗವತರಾದ ಪ್ರಶಾಂತ ರೈ ಪುತ್ತೂರು ಹಾಗೂ ರಚನಾ ಚಿತ್ಕಲ್ ಕಾವ್ಯ ಗಾಯನ ನಡೆಸಿಕೊಟ್ಟರು. ಯಕ್ಷದೇವ ಮಿತ್ರ ಮಂಡಳಿಯ ಎಂ. ದೇವಾನಂದ ಭಟ್ ಬೆಳುವಾಯಿ ಮದ್ದಳೆಯಲ್ಲಿ ಸಹಕರಿಸಿದರು.
ಶ್ರೀ ಮದ್ಭಾಗವತ ಮಹಾಕಾವ್ಯದಲ್ಲಿ ಬರುವ ಕೃಷ್ಣನ ಕಥೆಗೆ ಭಿನ್ನವಾಗಿ, ತುಳುನಾಡಿನ ಆಚಾರ, ವಿಚಾರ ಮತ್ತು ಜನಜೀವನದೊಂದಿಗೆ ಹಾಸುಹೊಕ್ಕಾಗಿರುವಂತೆ ರಚಿಸಲ್ಪಟ್ಟ ಮಂದಾರರ ಕಾವ್ಯದ ವೈಶಿಷ್ಟ್ಯವನ್ನು ಭಾಸ್ಕರ ರೈ ಕುಕ್ಕುವಳ್ಳಿಯವರು ತಮ್ಮ ವ್ಯಾಖ್ಯಾನದಲ್ಲಿ ತೌಲನಿಕವಾಗಿ ವಿಶ್ಲೇಷಿಸಿದರು. ದೇವೆರೆ ಚಿತ್ತ, ತರಲೆದ ಬಿರ್ದಾಲಿ, ಬರ್ಸದ ಬೊಳ್ಕಿರಿ, ಮಾಯಣದ ಬೊಂಬೆ, ಲೂಟಿದ ಕೂಟ, ಗುಡ್ಡೆದ ಪರ್ಬ ಕಾವ್ಯ ಭಾಗಗಳಲ್ಲಿ ಬರುವ ತುಳುನಾಡಿನ ಪ್ರಕೃತಿ ವರ್ಣನೆ, ಆಟ – ಕೂಟಗಳು, ತಿಂಡಿ – ತಿನಿಸು, ದೈವಾರಾಧನೆ, ನಂಬಿಕೆ – ನಡಾವಳಿಗಳನ್ನು ಕೃಷ್ಣನ ಕಥೆಗೆ ಪೂರಕವಾಗಿ ಬಳಸಿಕೊಂಡ ಕವಿ ಚಮತ್ಕಾರವನ್ನು ಸೋದಾಹರಣವಾಗಿ ಬಣ್ಣಿಸಿದರು.
ಕಲಾವಿದರ ಸಮ್ಮಾನ:
ಕಾವ್ಯ ಯಾನದಲ್ಲಿ ಭಾಗವಹಿಸಿದ ಕಲಾವಿದರನ್ನು ಮತ್ತು ವಿದ್ವಾಂಸರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶಾಲು – ಫಲ ಮಂತ್ರಾಕ್ಷತೆ ನೀಡಿ ಶ್ರೀ ಮಠದ ವತಿಯಿಂದ ಸನ್ಮಾನಿಸಿದರು. ಮಂದಾರ ಕೇಶವ ಭಟ್ಟರ ಪುತ್ರಿ ಶಾರದಾಮಣಿ, ತುಳುವ ಮಹಾಸಭೆಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ್ ಸಪ್ರೆ, ತುಳುಕೂಟ ಬೆದ್ರದ ಜಯಂತಿ ಎಸ್. ಬಂಗೇರ, ಚಂದ್ರಹಾಸ ದೇವಾಡಿಗ, ಸುದೇಶ್ ಕುಮಾರ್ ಪಟ್ಟಶೆಟ್ಟಿ ಉಪಸ್ಥಿತರಿದ್ದರು.
ತುಳುವ ಮಹಾಸಭಾದ ಸಂಚಾಲಕ ಮತ್ತು ತುಳು ವರ್ಲ್ಡ್ ಮುಖ್ಯಸ್ಥ ಡಾ.ರಾಜೇಶ್ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಂದಾರ ಪ್ರತಿಷ್ಠಾನದ ಪರವಾಗಿ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ವಂದಿಸಿದರು.