ಗುರಿಕ್ಕಾರರು ಮಠ ವ್ಯವಸ್ಥೆಯ ಜೀವನಾಡಿ: ರಾಘವೇಶ್ವರ ಶ್ರೀ…

ಗೋಕರ್ಣ: ಗುರಿಕ್ಕಾರರು ಸಮಾಜದ ನಡುವೆ ಗುರುಗಳ ಪ್ರತಿನಿಧಿಗಳಾಗಿ ಕೆಲಸ ಮಾಡಿದರೆ ಗುರುಪೀಠದ ಮುಂದೆ ಶಿಷ್ಯರ ಪ್ರತಿನಿಧಿಯಾಗಿ ಕೆಲಸ ಮಾಡುವ ಮೂಲಕ ಇಡೀ ಮಠದ ವ್ಯವಸ್ಥೆಯ ಜೀವನಾಡಿಯಾಗಿ ಬೆಳೆದಿದ್ದಾರೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 47ನೇ ದಿನವಾದ ಸೋಮವಾರ ಸಮಾಜದ ಸಮಸ್ತ ಗುರಿಕ್ಕಾರರ ವತಿಯಿಂದ ಸರ್ವಸೇವೆ ಸ್ವೀಕರಿಸಿ ಗುರಿಕ್ಕಾರರ ಸಮಾವೇಶದಲ್ಲಿ ಆಶೀರ್ವಚನ ಅನುಗ್ರಹಿಸಿದರು.
ಗುರಿಕ್ಕಾರರ ವ್ಯವಸ್ಥೆ ಮಠದ ವ್ಯಾಪ್ತಿಯ ವಿಶಿಷ್ಟ ಪದವಿ. ಈ ಸುಂದರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಿ, ಶಿಷ್ಯರ ಮಧ್ಯೆ ಗುರುಗಳನ್ನು ಪ್ರತಿನಿಧಿಸುವವರು ಗುರಿಕ್ಕಾರರು. ಶುಭ- ಅಶುಭ ಕಾರ್ಯಗಳೆಲ್ಲವೂ ಅವರ ಮಾರ್ಗದರ್ಶನದಂತೆ ನಡೆಯುತ್ತವೆ. ಶಿಷ್ಯರ ನಡುವೆ ಗುರುಗಳನ್ನು ಸ್ಥಾಪಿಸುವವರು ಗುರಿಕ್ಕಾರರು ಎಂದು ಬಣ್ಣಿಸಿದರು.
ದೂರ ಇರುವ ಭಗವಂತ ಅವತಾರವೆತ್ತಿ ಭೂಮಿಯಲ್ಲಿ ನಮ್ಮ ಬಳಿಗೆ ಬರುವಂತೆ, ಗುರುಗಳು ಗುರಿಕ್ಕಾರರ ಮೂಲಕ ಸಮಾಜಕ್ಕೆ ಮತ್ತಷ್ಟು ಹತ್ತಿರವಾಗುತ್ತಾರೆ. ಗುರುಗಳ ಪ್ರತಿನಿಧಿಗಳಾಗಿ ಯೋಗ್ಯ ಶಿಷ್ಯನನ್ನು ನೇಮಿಸಿ, ಎಲ್ಲ ಶಿಷ್ಯರನ್ನು ತಲುಪಲು ನೆರವಾಗುತ್ತಾರೆ. ಅಂತೆಯೇ ಗುರುಪೀಠದ ಮುಂದೆ ಶಿಷ್ಯರ ನಾಯಕನಾಗಿ ಕಾರ್ಯ ನಿರ್ವಹಿಸುತ್ತಾರೆ. ಸಮಾಜದ ಜ್ಞಾನ, ಶಕ್ತಿ, ಧೈರ್ಯವಾಗಿ ಶಿಷ್ಯರನ್ನು ಪ್ರತಿನಿಧಿಸುವುದು ಸುಲಭದ ಕಾರ್ಯವಲ್ಲ ಎಂದರು.
ರಾಮಾಯಣದಲ್ಲಿ ಅಧಮ ದೂತ, ಮಧ್ಯಮ ದೂತ ಮತ್ತು ಉತ್ತಮ ದೂತನ ವರ್ಣನೆ ಇದೆ. ಹೇಳಿದ್ದನ್ನೂ ಸರಿಯಾಗಿ ಮಾಡದವನು ಅಧಮ ದೂತನಾದರೆ, ಹೇಳಿದ್ದನ್ನಷ್ಟೇ ಮಾಡುವವನು ಮಧ್ಯಮ. ಹೇಳಿದ್ದಕ್ಕಿಂತಲೂ ಹೆಚ್ಚಿನದನ್ನು ಮಾಡುವವನು ಉತ್ತಮ ದೂತ. ಗುರಿಕ್ಕಾರರು ಇವರ ಪೈಕಿ ಉತ್ತಮ ದೂತರ ವರ್ಗಕ್ಕೆ ಸೇರುತ್ತಾರೆ ಎಂದು ವಿಶ್ಲೇಷಿಸಿದರು.
ಮಠದ ಕಾರ್ಯಗಳ ಪೈಕಿ ಸಿಂಹಪಾಲನ್ನು ಗುರಿಕ್ಕಾರರು ನಿರಪೇಕ್ಷವಾಗಿ ನಿರ್ವಹಿಸುತ್ತಿದ್ದಾರೆ. ವಯಸ್ಸು, ಅನಾರೋಗ್ಯ, ಒತ್ತಡವನ್ನೂ ಲೆಕ್ಕಿಸದೇ ನಿಸ್ಪೃಹ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಯುವಕರು ತಮ್ಮ ಊರಿಗೆ, ಬೇರಿಗೆ ಮರಳಿ ಬನ್ನಿ ಎಂದು ಕರೆ ನೀಡಿದರು.
ಗುರಿಕ್ಕಾರರು ಮಠದ ಜೀವನಾಡಿ. ಇಡೀ ಮಠದ ವ್ಯವಸ್ಥೆಯ ಜೀವ ಇರುವುದೇ ಗುರಿಕ್ಕಾರರ ಬಳಿ. ನಾಯಕರಾಗಿ, ಸೈನಿಕರಾಗಿ, ಸೇವಕರಾಗಿ ಸಮಾಜದ ರಕ್ಷಣೆ ಕಾರ್ಯವನ್ನು ಮಾಡಬೇಕು ಎಂದು ಆಶಿಸಿದರು. ಮುಂದಿನ ವರ್ಷದಿಂದ ವರ್ಧಂತಿಯ ಮರುದಿನವನ್ನು ಗುರಿಕ್ಕಾರರ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದರು.
ದಿನಕ್ಕೊಂದು ಆಂಗ್ಲಪದ ತ್ಯಜಿಸುವ ಅಭಿಯಾನದಲ್ಲಿ ಟೈಪಿಂಗ್ ಪದ ಬಿಡುವಂತೆ ಕರೆ ನೀಡಿದರು. ಬೆರಳಚ್ಚು, ಬೆರಳೊತ್ತು, ಮುದ್ರಾಲೇಖ, ಟೆಂಕಿಸು ಎಂಬ ಪದ ಬಳಸಬಹುದು ಎಂದು ಸಲಹೆ ಮಾಡಿದರು. ಕನ್ನಡದ ಪದಗಳೆಂಬ ಕೋಟೆಗೆ ಇಂಗ್ಲಿಷ್ ಪದಗಳೆಂಬ ಶತ್ರುಗಳು ಲಗ್ಗೆ ಇಟ್ಟು, ಭಾಷೆಯ ಅಸ್ತಿತ್ವಕ್ಕೇ ಧಕ್ಕೆ ತಂದಿದೆ, ಇಂಗ್ಲಿಷ್ ಮೂಲಕ ಕನ್ನಡವನ್ನು ಪರಿಚಯಿಸಿಕೊಳ್ಳುವ ಪ್ರಮೇಯ ಬಂದಿದೆ. ಇದು ಬದಲಾಗವೇಕು ಎಂದರು.
ಶ್ರೀಮಾತೆ ವಿಜಯಲಕ್ಷ್ಮಿ, ಹಿರಿಯ ಹೈಕೋರ್ಟ್ ವಕೀಲ ಸತೀಶ್ ಭಟ್ಟ ಕರ್ಕಿ, ಮಂಡಲ ಗುರಿಕ್ಕಾರರಾದ ಪ್ರಕಾಶ್ ಮಳಲಗದ್ದೆ, ಶಂಭು ಭಟ್ ಕಡತೋಕ, ಉದಯಕುಮಾರ್ ಖಂಡಿಗ, ಲಕ್ಷ್ಮೀನಾರಾಯಣ ಕವಲಕೈ, ಎಂ. ಸತ್ಯನಾರಾಯಣ ಭಟ್, ಸುಬ್ರಹ್ಮಣ್ಯ ಚಿಪ್ಲಿ, ಕೆ.ಎಂ.ಮಂಜುನಾಥ್, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ತಂಡದ ರಾಘವೇಂದ್ರ, ನಿಖಿಲ್, ಅಜಿತ, ವಿಷ್ಣುಬನಾರಿ, PRO ಎಂ.ಎನ್.ಮಹೇಶ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಗುರಿಕ್ಕಾರರ ಯೋಗಕ್ಷೇಮಕ್ಕೆ ಪ್ರಾರ್ಥಿಸಿ ನವಗ್ರಹ ಹವನ, ಮಹಾಮೃತ್ಯುಂಜಯ ಹವನ ಮತ್ತು ಆಂಜನೇಯ ಹವನ ನಡೆಯಿತು. ಕುಮಟಾದ ಹಿರಿಯ ವಕೀಲರು ಶ್ರೀಗಳಿಂದ ಆಶೀರ್ವಾದ ಪಡೆದರು.