ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಮೋಟರ್ ಮೋಬ್-2023…
ಪುತ್ತೂರು: ಕಳೆದೊಂದು ದಶಕದಿಂದ ಅಟೋಮೊಬೈಲ್ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯಾಗುತ್ತಿದ್ದು, ಕೃತಕ ಬುದ್ದಿಮತ್ತೆ ಹಾಗೂ ರೊಬೊಟಿಕ್ಸ್ ತಂತ್ರಜ್ಞಾನದ ಅಳವಡಿಕೆಯಿಂದ ಸಾಕಷ್ಟು ಹೊಸತನ ಕಂಡುಬರುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು ಹಾಗೂ ಖ್ಯಾತ ಸ್ವರ್ಣೋದ್ಯಮಿಗಳೂ ಆದ ಬಲರಾಮ ಆಚಾರ್ಯ.ಜಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಹೊಸ ಹಾಗೂ ಹಳೆಯ ಕಾರುಗಳ ಹಾಗೂ ದ್ವಿಚಕ್ರ ವಾಹನಗಳ ಪ್ರದರ್ಶನ ಮೋಟರ್ ಮೋಬ್-2023ಕ್ಕೆ ಚಾಲನೆ ನೀಡಿ ಮಾತನಾಡಿದರು.
90% ಜನ ಪ್ರಯಾಣಕ್ಕೆ ಹಾಗೂ ಸಾಗಾಟಕ್ಕೆ ವಾಹನಗಳನ್ನು ಬಳಸಿಕೊಳ್ಳುತ್ತಾರೆ. 10% ಜನರಿಗೆ ವಾಹನಗಳನ್ನು ಹೊಂದುವುದು ಒಂದು ಹವ್ಯಾಸ ಎಂದ ಅವರು ಇಂತಹ ಪ್ರದರ್ಶನವು ಪುತ್ತೂರಿಗೆ ಹೊಸತು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ವಾಹನವನ್ನು ಓಡಿಸುವ ಸಂದರ್ಭದಲ್ಲಿ ನನ್ನಂತೆ ಇತರರೂ ರಸ್ತೆಯಲ್ಲಿ ವಾಹನವನ್ನು ಓಡಿಸುತ್ತಿದ್ದಾರೆ ಎನ್ನುವ ಅರಿವು ಪ್ರತಿಯೊಬ್ಬ ಚಾಲಕನಲ್ಲಿರಬೇಕು ಹಾಗೂ ರಸ್ತೆ ನಿಯಮಗಳ ಮತ್ತು ಸುರಕ್ಷತೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್ ಮಾತನಾಡಿ ಕಳೆದ ಮೂರು ದಶಕಗಳಿಂದ ವಾಹನಗಳಲ್ಲಿ ಆಮೂಲಾಗ್ರ ಬದಲಾವಣೆಯಾಗುತ್ತಿದ್ದು ಈ ಬದಲಾವಣೆಯ ಬಗ್ಗೆ ಯುವಜನತೆಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ. ವಿದ್ಯಾರ್ಥಿಗಳು ಕೂಡಾ ಹೊಸತನ್ನು ಆವಿಷ್ಕರಿಸಿ ಸಮಾಜದ ಒಳಿತಿಗೆ ನೀಡಬೇಕು. ವಾಹನವನ್ನು ಚಲಾಯಿಸುವ ಸಂದರ್ಭದಲ್ಲಿ ಹೆತ್ತವರು ಹಾಗೂ ಇತರರು ನಮ್ಮ ಬರುವಿಕೆಗೆ ಕಾಯುತ್ತಿರುತ್ತಾರೆ ಎನ್ನುವ ಯೋಚನೆ ಮನದಲ್ಲಿರಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಬೈಕ್ ಹಾಗೂ ಕಾರುಗಳ ರ್ಯಾಲಿ ಹಾಗೂ ನುರಿತ ಚಾಲಕರಿಂದ ಸ್ಟಂಟ್ ಪ್ರದರ್ಶನ ನಡೆಯಿತು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ, ಪ್ರೊ.ಹರೀಶ್.ಎಸ್.ಆರ್ ವಂದಿಸಿದರು. ವಿದ್ಯಾರ್ಥಿನಿ ರಚನಾ.ಎಂ ಕಾರ್ಯಕ್ರಮ ನಿರ್ವಹಿಸಿದರು.