ಉದ್ಯಮ ಮತ್ತು ಇಂಜಿನಿಯರಿಂಗ್ ಶಿಕ್ಷಣದ ನಡುವೆ ಅಂತರ ಸೃಷ್ಟಿಸುತ್ತಿರುವ ಪ್ರಸಕ್ತ ಸಮಸ್ಯೆಗಳು…
ಉದ್ಯಮ ಮತ್ತು ಇಂಜಿನಿಯರಿಂಗ್ ಶಿಕ್ಷಣದ ನಡುವೆ ಅಂತರ ಸೃಷ್ಟಿಸುತ್ತಿರುವ ಪ್ರಸಕ್ತ ಸಮಸ್ಯೆಗಳು
ಲೇ: ಡಾ. ಅರ್.ಜಿ.ಡಿ’ಸೋಜಾ
ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ತಲೆಬರಹಗಳು ನಮ್ಮ ಇಂಜಿನಿಯರಿಂಗ್ ಪದವೀಧರರಿಗೆ ತಮ್ಮ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯಗಳ ಕೊರತೆಯಿದೆ ಎಂಬುದನ್ನು ಬೊಬ್ಬಿಟ್ಟು ಹೇಳುಕೊಳ್ಳುತ್ತಿವೆ. ತಜ್ಞರ ಪ್ರಕಾರ ಇದರ ದೆಸೆಯಿಂದ ಉದ್ಭವಿಸುವ ನಿರುದ್ಯೋಗ ಸಮಸ್ಯೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ಸ್ಧಿತಿಯಲ್ಲಿ ಏರುಪೇರಿನೊಂದಿಗೆ ವ್ಯಾಪಕ ಪ್ರಮಾಣದಲ್ಲಿ ಅಸಮಾಧಾನ ಮತ್ತು ಭ್ರಮನಿರಸನ ನೆಲೆವೂರುವುದು.
ಇಂಜಿನಿಯರಿಂಗ್ ಪದವೀಧರರ ಉದ್ಯೋಗಶೀಲತೆ ತಾವು ಕಲಿತಿರುವ ಪರಿಕಲ್ಪನೆಗಳನ್ನು ಬಳಸಿ ನಿರಂತರವಾಗಿ ನಾವೀನ್ಯತೆಯ ಸಂಗತಿಗಳನ್ನು ಅಭಿವೃದ್ಧಿ ಪಡಿಸುವ ಹಾಗೂ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಾಮರ್ಥ್ಯದ ಮೇಲೆ ಅವಲಂಬಿಸಿದೆ. ಕಷ್ಟಕರವಾದ ಆರ್ಥಿಕ ಸನ್ನಿವೇಶದಲ್ಲಿ ಸಂಸ್ಧೆಗಳು ಕೌಶಲ್ಯಗಳಲ್ಲಿ ತರಬೇತುಗೊಳಿಸುವುದಕ್ಕೆ ತುಂಬಾ ಖರ್ಚು ಮಾಡುದಕ್ಕಿಂತ ಉದ್ಯೋಗಕ್ಕೆ ಸೇರಿದ ಮೊದಲನೆಯ ದಿನದಿಂದಲೇ ಉತ್ಪಾದಕ ಉದ್ಯೋಗ ಕೌಶಲ್ಯವಿರುವ ಇಂಜಿನಿಯರಿಂಗ್ ಪದವೀಧರರನ್ನು ಬಯಸುತ್ತದೆ. ಬೇರೆ ಬೇರೆ ಸ್ತರದ ಪಟ್ಟಣಗಳಲ್ಲಿ ಉದ್ಯೋಗ ಸಿದ್ದ ಕೌಶಲ್ಯಗಳು ಬೇರೆ ಬೇರೆಯಾಗಿದ್ದು ಮೇಲುಸ್ತರದ ಪಟ್ಟಣಗಳಲ್ಲಿ ಇಂಜಿನಿಯರಿಂಗ್ ಪದವೀಧರ ಉದ್ಯೋಗಾಂಕ್ಷಿಗಳು ಸಮಾನ ಕೌಶಲ್ಯ ಹಾಗೂ ಅರ್ಹತೆ ಇದ್ದರೂ ಉದ್ಯೋಗ ವಂಚಿತರಾಗಿರುತ್ತಾರೆ. ಆಂಗ್ಲ ಭಾಷೆಯ ಹಿಡಿತವಿಲ್ಲದಿರುವುದು ಪ್ರಮುಖ ವಿಷಯವಾದರೆ, ಗಣಕಯಂತ್ರ ತಂತ್ರಾಂಶ ಸೂಚನೆ ಬರೆಯುವ ಕ್ಷಮತೆಯಲ್ಲಿ ಸಮಸ್ಯೆ ಇವರನ್ನು ನಿರುದ್ಯೋಗಿಗಳಾಗಿಸುತ್ತದೆ. ಆಂಗ್ಲಭಾಷಾ ಜ್ಞಾನದ ಸಮಸ್ಯೆ ಹಾಗೂ ಅರಿವಿನ ಕೌಶಲ್ಯ ಸಾಮರ್ಥ್ಯ ದೋಷ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಬರುವ ಅಕಾಂಕ್ಷಿಗಳ ಅಸಮರ್ಥತೆಯಾಗಿರುತ್ತದೆ ಎಂಬುವುದು ನಿಜ.
ಸೆಮಿಸ್ಟರ್ ಪದ್ಧತಿ ಮತ್ತು ನಿರಂತರವಾದ ಮೌಲ್ಯಮಾಪನ ಪ್ರಕ್ರಿಯೆಯನ್ನು ಒಳಗೊಂಡಿರುವ ದೋಷಪೂರಿತ ಶಿಕ್ಷಣ ವ್ಯವಸ್ಧೆಯಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಯಲ್ಲಿ ಅಸಕ್ತಿಯಿಲ್ಲದ ಕಾರಣ ಇವೆರಡರ ಅಪೇಕ್ಷಿತ ಪಾತ್ರಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಇಂತಹ ಉಪಕ್ರಮಗಳ ನಿರ್ದಿಷ್ಟ ಉದ್ದೇಶವು ಭೋದಕ ವರ್ಗ ಮತ್ತು ವಿದ್ಯಾರ್ಥಿಗಳು ಸಮಾನವಾಗಿ ಅರ್ಥೈಸಿಕೊಳ್ಳದ ಹೊರತು ಈ ವಿಧಾನಗಳು ಬಹುಶ: ಕೆಲಸ ಮಾಡಲು ಸಾಧ್ಯವಿಲ್ಲ.
ಸುಲಭವಾಗಿ ಅನುಮೋದನೆ ಕೊಡುವ ಸಂಸ್ಧೆಗಳು ಹಾಗೂ ಅನುಮತಿ ಕೊಡುವ ಸರ್ಕಾರದ ಧೋರಣೆ ಸೂಕ್ತ ಅನುಭವ ಇಲ್ಲದ ಶೈಕ್ಷಣಿಕ ವಿಶ್ವಸ್ಧ ಮಂಡಳಿಗಳು ನಡೆಸುವ ಇಂಜಿನಿಯರಿಂಗ್ ಶಿಕ್ಷಣ ಸಂಸ್ಧೆಗಳು ಅಣಬೆಯಂತೆ ಹುಟ್ಟಿಕೊಳ್ಳಲು ಕಾರಣವಾಗಿದೆ.
ಇಂಜಿನಿಯರಿಂಗ್ ಶಿಕ್ಷಣ ಪಠ್ಯಕ್ರಮದ ನವೀಕರಣದ ವೇಗ ವಿಶ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಗುವ ಬದಲಾವಣೆಯ ಅತೀ ವೇಗಕ್ಕೆ ಹೊಂದಿಕೊಂಡಿಲ್ಲ. ಶಿಕ್ಷಣದ ನಂತರ ಸೂಕ್ತ ಉದ್ಯಮದಲ್ಲಿ ವಾಸ್ತವವಾಗಿ ಸಹಾಯ ಮಾಡುವ ವಿಷಯಗಳಲ್ಲಿ ನಿಯಮಿತವಾಗಿ ಪಠ್ಯಕ್ರಮ ನವೀಕರಿಸಲ್ಪಡುವುದಿಲ್ಲ. ಇಂಜಿನಿಯರಿಂಗ್ ಶಿಕ್ಷಣ ಪದವಿಯ ನಂತರ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯಗಳು ಹಾಗೂ ಇಂಜಿನಿಯರಿಂಗ್ ಶಿಕ್ಷಣ ಪಠ್ಯಕ್ರಮದ ವಿಷಯಗಳಲ್ಲಿ ಬಹಳಷ್ಟು ಅಂತರವಿದೆ.
ಪದವಿ ಶಿಕ್ಷಣ ನಡೆಯುವಾಗ ಉದ್ಯೋಗ ನೇಮಕಾತಿ ಕಾರ್ಯದಲ್ಲಿ ಬಿಟ್ಟುಹೋದ ಇಂಜಿನಿಯರಿಂಗ್ ಪದವೀಧರರು ನಿರಂತರವಾಗಿ ಬೆಳೆಯುತ್ತಿರುವ ಇಂಜಿನಿಯರಿಂಗ್ ಶೈಕ್ಷಣಿಕ ಸಂಸ್ಧೆಗಳಲ್ಲಿ ಭೋದಕರಾಗಿ ಸೇರಿ ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣ ಭೋದಕರ ಕೊರತೆಯನ್ನು ಉಂಟುಮಾಡಿದೆ. ಇಂಜಿನಿಯರಿಂಗ್ ಭೋದಕ ವರ್ಗವು ಉದ್ಯಮದಲ್ಲಿ ಉತ್ತಮರಾದವರನ್ನು ಒಳಗೊಂಡು ಅತ್ಯುತ್ತಮ ಇಂಜಿನಿಯರಿಂಗ್ ಕೌಶಲ್ಯಗಳನ್ನು ಹೇಳಿಕೊಡುವಂತಹ ಸಾಮರ್ಥ್ಯದವರು ಆಗಿರುವುದಿಲ್ಲ. ಅಂತೆಯೇ ಇಂಜಿನಿಯರಿಂಗ್ ಶಿಕ್ಷಕರ ಭೋದಕ ವರ್ಗದವರ ವೇತನ ಅತ್ಯಂತ ಆಕರ್ಷಕವಾಗಿಲ್ಲ ಹಾಗೂ ವೃತಿಯ ಬೆಳವಣೆಗೆಯು ಕೂಡ ಉತ್ತಮವಾಗಿರುವುದಿಲ್ಲ.
ನಾವೀನ್ಯತೆಯ ಬಗ್ಗೆ ಯೋಚಿಸುವ ಮತ್ತು ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮತ್ತು ಪ್ರಶ್ನೆಗಳನ್ನು ಕೇಳುವ ಅವಕಾಶ ಮತ್ತು ಪ್ರವೃತ್ತಿಯನ್ನು ಬೆಳೆಸದೆ ಇರುವ ಕಾರಣ ಇಂಜಿನಿಯರಿಂಗ್ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ಹೊಸತನ ಮತ್ತು ಸಂಶೋಧನೆಯ ಕೊರತೆಯುಂಟಾಗಿದೆ. ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಪ್ರಾಥಮಿಕ ಶಿಕ್ಷಣ ಮಟ್ಟದಿಂದ ಪ್ರಶ್ನೆಗಳನ್ನು ಕೇಳದೆ ನೂತನವಾದ ಯೋಚನಾ ಲಹರಿಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಉದ್ಯೋಗರಂಗದಲ್ಲಿ ಕೂಡ ನಾವೀನ್ಯತೆಯೊಳಗೊಂಡ ಬದಲಾವಣೆ ತರಲು ಸಾಧ್ಯವಾಗುತ್ತಿಲ್ಲ.
ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯ ಆಧಾರಿತ ಶಿಕ್ಷಣದ ಕೊರತೆ ವಿದ್ಯಾರ್ಥಿಗಳು ನೈಜ ಜಗತ್ತಿನಲ್ಲಿ ಉದ್ಯಮರಂಗದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಸೂಕ್ತ ತರಬೇತಿಯನ್ನು ಪಡೆದುಕೊಳ್ಳುವುದರಲ್ಲಿ ವಂಚಿತರಾಗಿರುತ್ತಾರೆ. ಹೊಸ ಇಂಜಿನಿಯರಿಂಗ್ ಪದವೀಧರರು ತಮ್ಮ ಮೂಲಭೂತ ಪರಿಕಲ್ಪನೆಗಳು, ತಾಂತ್ರಿಕ ಮಾಹಿತಿ, ಗ್ರಾಹಕ ನಿರ್ವಹಣೆಗೆ ಮತ್ತು ಅಂತರ ವಿಷಯ ಜ್ಞಾನದಲ್ಲಿ ಸಾಕಷ್ಟು ಸಾಮರ್ಥ್ಯವಿಲ್ಲದ ಕಾರಣ ಸಮಸ್ಯೆಗಳನ್ನು ಎದುರಿಸುತ್ತಾರೆ.
ವಿದ್ಯಾನಿಲಯಕ್ಕೆ ಬಂದು ಉದ್ಯೋಗ ನೇಮಕಾತಿ ಮಾಡುವ ಕಂಪೆನಿಗಳು ಶಿಕ್ಷಣ ಸಂಸ್ಧೆಯ ಹೆಸರಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ಸಂಭಾವ್ಯ ಉದ್ಯೋಗಿಗಳನ್ನು ನೇಮಕ ಮಾಡಲು ಉನ್ನತ ಸ್ತರದ ಶಿಕ್ಷಣ ಸಂಸ್ಧೆಗಳಲ್ಲಿ ಅಧ್ಯಯನ ಮಾಡದ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತದೆ. ಇದರಿಂದಾಗಿ ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗ ವಂಚಿತರಾಗುತ್ತಾರೆ. ಮಾತ್ರವಲ್ಲದೆ ಉದ್ಯೋಗ ರಂಗದಲ್ಲಿ ಗುಣಮಟ್ಟದ ಉದ್ಯೋಗಿಗಳ ಕೊರತೆ ಉಂಟಾಗುತ್ತದೆ.
ತುಲನಾತ್ಮಕವಾಗಿ ಐಟಿ ವಲಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶದಿಂದಾಗಿ ಇತರ ವಿಷಯದ ಇಂಜಿನಿಯರಿಂಗ್ ಪದವೀಧರರು ಕೂಡ ಐಟಿ ಸಂಬಂಧಿತ ಶಿಕ್ಷಣವನ್ನು ಪಡೆದು ಐಟಿ ರಂಗದ ಉದ್ಯೋಗವನ್ನು ಸೇರಿಕೊಳ್ಳುತ್ತಾರೆ. ಈ ಅಸಮರ್ಪಕ ಶಿಕ್ಷಣದ ಅಂತಿಮ ಫಲಿತಾಂಶ ಎಂದರೆ ಪದವೀಧರರು ತಮ್ಮ ಮೂಲ ತಾಂತ್ರಿಕ ವಿಷಯ ಹಾಗೂ ಐಟಿ ವಿಷಯಗಳೆರಡಲ್ಲಿಯೂ ಸಂಪೂರ್ಣ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ.
ಸರಿಯಾದ ಅಂಗ್ಲ ಭಾಷಾ ಅಭಿವ್ಯಕ್ತಿಶೀಲ ಕೌಶಲ್ಯಗಳು, ಅಗತ್ಯ ಮೃದು ಕೌಶಲ್ಯಗಳು ಮತ್ತು ವಿಶ್ಲೇಷಣಾತ್ಮಕ ಮತ್ತು ಪರಿಮಾಣಾತ್ಮಕ ಕೌಶಲ್ಯಗಳ ಕೊರತೆ ಇಂಜಿನಿಯರಿಂಗ್ ಪದವೀಧರರಲ್ಲಿ ನಿರುದ್ಯೋಗ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಪ್ರತಿಭಾವಂತ ಅಭ್ಯರ್ಥಿ ಕೂಡ, ಸಾಮರ್ಥ್ಯದ ಕೊರತೆಯಿಂದಾಗಿ ತಮ್ಮ ದೃಷ್ಟಿಕೋನಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ವಿಫಲನಾಗಿ, ಗ್ರಾಹಕ ನಿರ್ವಹಣೆ ಮತ್ತು ತಂಡದ ಸಂವಹನ ಕೌಶಲ್ಯ ಸಾಮರ್ಥ್ಯದ ಕಡೆಗೆ ಋಣಾತ್ಮಕ ಪರಿಣಾಮ ಬೀರುತ್ತಾನೆ.
ಲೇ: ಡಾ. ಅರ್.ಜಿ.ಡಿ’ಸೋಜಾ
ಪ್ರಾಂಶುಪಾಲರು,ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೂಡುಬಿದ್ರಿ