ಸಂಪ್ರದಾಯದ ಸಾಹಿತಿ “ಜೀಯು”…
ಲೇ:ಜಯಾನಂದ ಪೆರಾಜೆ
ಕರಾವಳಿಯ ಅಂಕೋಲಾ ಸಮೀಪದ ಹಿರೇಗುತ್ತಿಯ ಹಿರಿಯ ಮನಸಿನ ಚಿಂತಕ ಸಾಹಿತಿ ಜಿ.ಯು.ನಾಯಕ ಬಹುತೇಕ ಉಡುಪಿ ಪರಿಸರದಲ್ಲಿ ಹೆಚ್ಚು ಪರಿಚಿತ ಹೆಸರು.
ಶೈಕ್ಷಣಿಕ ಬಲಾಢ್ಯ ಕುಟುಂಬದಿಂದ ಬಂದ ಗೋವಿಂದರಾವ್ ಉದ್ಯಂಡ ನಾಯಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾರ್ಥಕ ಸಾಧನೆಯನ್ನು ಮಾಡಿದವರು.ಇದಕ್ಕೆ ಪೂರಕ ಎನ್ನುವಂತೆ ಇವರ ತಂದೆ, ತಾಯಿ ಮತ್ತು ಸೋದರ ಸಾಹಿತ್ಯ ಸಾಮಾಜಿಕ ಕೆಲಸ ಕಾರ್ಯವನ್ನು ಮಾಡಿದವರು.
ಚಿಂತನಶೀಲ ಸಂಗತಿಗಳು, ಅದರಲ್ಲೂ ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಾಯಕರಿಗೆ ಅವರ ಪತ್ನಿ ದಿ. ಶ್ರೀಮತಿ ವಿಠೂಬಾಯಿ ಅವರೂ ಸಂಪೂರ್ಣ ಪ್ರೋತ್ಸಾಹ ನೀಡಿದ್ದು ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಯಶಸ್ವಿ ಮಹಿಳೆಯ ಪಾತ್ರ ಮಹತ್ವದ್ದು ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ. 43 ವರ್ಷಗಳ ಇವರ ತುಂಬು ದಾಂಪತ್ಯದಲ್ಲಿ ಶೈಕ್ಷಣಿಕ, ಸಾಹಿತ್ಯ, ಧಾರ್ಮಿಕತೆಯ ಪ್ರಗತಿಪರ ಚಿಂತನೆಗಳ ವೇದಿಕೆಯಾಗಿತ್ತು. ಒಬ್ಬ ಮಗ ಪ್ರಕಾಶ, ಬ್ಯಾಂಕ್ ಉದ್ಯೋಗಿಯಾದ ಸೊಸೆ, ಇಬ್ಬರು ಮೊಮ್ಮಕ್ಕಳು ಸಂತೃಪ್ತ ಕುಟುಂಬದ ರೂವಾರಿ ಶ್ರೀ ಗೋವಿಂದ ನಾಯಕರು.
ಹತ್ತು ಹಲವು ಸಾಹಿತ್ಯ,ಕಲಾ ಸಂಘಟನೆಗಳೊಂದಿಗೆ ಗುರುತಿಸಿಕೊಂಡ ” ಜಿಯು” ಅವರು ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಹೊತ್ತ ಧೀಮಂತರು. ಕರಾವಳಿಯಲ್ಲಿ ಕಚುಸಾಪ ಹೆಜ್ಜೆಗುರುತು ಕಾಣಿಸುವಲ್ಲಿ ಅವರ ಪಾತ್ರ ಸಂಘಟನಾ ಶಕ್ತಿ ಗಮನಾರ್ಹ.
ಸಹಸ್ರಾರು ಶಿಷ್ಯಬಳಗ ಹೊಂದಿದ ಜಿ.ಯು.ನಾಯಕ ಹತ್ತಾರು ಪದವಿ,ಪ್ರಶಸ್ತಿಯನ್ನು ಗಳಿಸಿದ ಸವ್ಯಸಾಚಿ,ಸ್ನೇಹಜೀವಿ ಕಿರಿಯರನ್ನು ಗೌರವದಿಂದ ಕಾಣುವ ವಿಶಾಲ ಮನಸಿನ ಹೃದಯವಂತರು.
ನೋವು,ನಲಿವು ಸರಿಸಮನಾಗಿ ಕಂಡ ಜೀಯು ದಂಪತಿಗಳು ಸಮಸ್ತ ಶೈಕ್ಷಣಿಕ ಹಾಗೂ ಸಾಹಿತ್ಯದ ಕ್ಷೇತ್ರದಲ್ಲಿ ಒಂದು ಆದರ್ಶದ ಸಂಕೇತವಾಗಿದ್ದಾರೆ. 2023 ರ ಆರಂಭದಲ್ಲಿ ವಯೋಮಾನ ಸಹಜವಾದರೂ, ಆಕಸ್ಮಿಕವಾಗಿ ಪತ್ನಿಯನ್ನು ಕಳೆದುಕೊಂಡ ಗೋವಿಂದ ನಾಯಕ ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದು, ನಿಸರ್ಗ ಮಡಿಲಿನ ಅಂಕೋಲೆ ತವರಿನಿಂದ ಕಾಂಕ್ರೀಟ್ ಕಾಡು, ಬೆಡಗಿನ ಬೆಂಗಳೂರಿಗೆ ನೆಲೆ ಬದಲಿಸುವುದು ಅಗತ್ಯ ಅನಿವಾರ್ಯ ಎಂಬುದು ಅವರಂತೆ ಅವರ ಅಭಿಮಾನಿಗಳಿಗೂ ಅಷ್ಟೇ ಬೇಸರದ ಸಂಗತಿ. ಕನ್ನಡದ ಬಹುತೇಕ ಹಿರಿಯ ಕವಿ,ಸಾಹಿತಿಗಳು ಕಾರಣಾಂತರಗಳಿಂದ ರಾಜಧಾನಿಯತ್ತ ವಲಸೆ ಹೋಗಿರುವುದು ನೋಡಿದರೆ, ಬದುಕು ಬರಹದ ಮೂಲಕ ಗುರುತಿಸಿಕೊಂಡ ಜಿಯು. ಕರಾವಳಿಯಂತೆ ಅಲ್ಲಿಯೂ ತಮ್ಮ ಹೆಜ್ಜೆಗುರಿತು ಮೂಡಿಸಬಲ್ಲರೆಂಬ ನಂಬಿಕೆ ಅವರ ಸ್ನೇಹಿತರಲ್ಲಿದೆ.
ಗುಮ್ಮಟಗಳ ನಗರಿ ವಿಜಯಪುರ ದಿಂದ ತಮ್ಮ ಶೈಕ್ಷಣಿಕ ಸೇವೆ ಸಲ್ಲಿಸಿದ ಗೋವಿಂದ ನಾಯಕ ನಂತರ ಕಾರವಾರ, ಉಡುಪಿಯ ಪರಿಸರದಲ್ಲಿ ಅಧ್ಯಾಪಕರಾಗಿ ಸಹಸ್ರಾರು ಶಿಷ್ಯಬಳಗ ಹೊಂದಿದ್ದಾರೆ. ಸಮಾನ ವಯಸ್ಕರು, ಸಮಾನ ಮನಸ್ಕರರ ತಾಣವಾದ ಕಚುಸಾಪ ಬಳಗದ ದಶಮಾನೋತ್ಸವ ಸಂಭ್ರಮ ನಾಯಕರಂತಹ ಹತ್ತಾರು ಸ್ನೇಹಿತರ ಸಹಕಾರದ ಸಂಭ್ರಮ, ಸ್ನೇಹ ಚಿರಾಯು. ಸಾಧನೆ ಯಾರದೇ ಆಗಿರಲಿ ಸಂಭ್ರಮ ಎಲ್ಲರದು. ಅದೇ ನಿಜವಾದ ಖುಷಿ..