ಯಕ್ಷಗಾನದ ದಶಾವತಾರಿ ಪುಳಿಂಚ ರಾಮಯ್ಯ ಶೆಟ್ಟಿ…
ಲೇ: ಭಾಸ್ಕರ ರೈ ಕುಕ್ಕುವಳ್ಳಿ
(ಯಕ್ಷಗಾನದ ಹಿರಿಯ ಕಲಾವಿದ, ಕನ್ನಡ ತುಳು ಪ್ರಸಂಗಗಳ ನವರಸ ನಾಯಕ ಪುಳಿಂಚ ರಾಮಯ್ಯ ಶೆಟ್ಟರು 2002 ಜುಲೈ 22ರಂದು ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು. ಅವರು ಗತಿಸಿ ಈ ತಿಂಗಳು 22ಕ್ಕೆ ಇಪ್ಪತ್ತು ವರ್ಷಗಳಾಗುತ್ತವೆ. ಈ ಸಂದರ್ಭದಲ್ಲಿ ಅವರ ನೆನಪಿಗಾಗಿ ಇದೊಂದು ಸಾಂದರ್ಭಿಕ ಲೇಖನ.)
‘ಇನಿತ ಆಟೊಗು ಪುಳಿಂಚೆರುಲ್ಲೆರಾ…? (ಇಂದಿನ ಆಟಕ್ಕೆ ಪುಳಿಂಚರಿದ್ದಾರೆಯೇ?) ಎಂಭತ್ತರ ದಶಕದಲ್ಲಿ ಯಕ್ಷಗಾನ ರಸಿಕರು ಕರ್ನಾಟಕ ಮೇಳದ ಟೆಂಟ್ ಹತ್ತಿರ ಬಂದು ಮೊದಲು ಕೇಳುತ್ತಿದ್ದ ಪ್ರಶ್ನೆ ಇದು. ಕಾರಣ ಆಗಿನ ಎಲ್ಲಾ ತುಳು ಪ್ರಸಂಗಗಳಲ್ಲಿ ಜನರ ನಿರೀಕ್ಷೆಯ ಪಾತ್ರಧಾರಿ ಪುಳಿಂಚ ರಾಮಯ್ಯ ಶೆಟ್ಟಿ! ಯಕ್ಷಗಾನ ರಂಗಸ್ಥಳದಲ್ಲಿ ಅವರು ಮಾಡದ ಪಾತ್ರವಿಲ್ಲ.
ನವರಸ ನಾಯಕ
ರಾಜವೇಷ, ಬಣ್ಣದ ವೇಷ, ಹಾಸ್ಯ-ಎಲ್ಲದರಲ್ಲೂ ಪುಳಿಂಚರದ್ದು ಬೇರೆಯೇ ಛಾಪು. ಒಂದರ್ಥದಲ್ಲಿ ಅವರು ಯಕ್ಷರಂಗದ ನವರಸನಾಯಕ! ಆದರೆ ರಂಗ ಪರಿವರ್ತನೆಯ ನಿರ್ಣಾಯಕ ಘಟ್ಟದಲ್ಲಿ ತುಳು ಪ್ರಸಂಗಗಳ ಜನಪ್ರಿಯತೆ ಹೆಚ್ಚಾದಂತೆ ಪುಳಿಂಚರಂಥವರಿಂದ ಜನ ಬಯಸಿದ್ದು ಅಪ್ಪಟ ಹಾಸ್ಯವನ್ನು. ಅವರ ಸಿದ್ದು, ಮಾಚು, ಬಳ್ಳು, ಕುಕ್ಕುಮುಡಿ ಸೋಂಪ, ಸೂಳೆನಾಗು, ಪೋಂಕ್ರ, ಎಂಕಮ್ಮ ನಾಯ್ಕೆದಿ ಮುಂತಾದ ಪಾತ್ರಗಳಿಗೆ ಯಕ್ಷರಸಿಕರು ಹುಚ್ಚೆದ್ದು ಕುಣಿಯುತ್ತಿದ್ದರು.
ಹಾಗೆ ನೋಡಿದರೆ ಪುಳಿಂಚ ರಾಮಯ್ಯ ಶೆಟ್ಟರು ತೀರಾ ಸಂಪ್ರದಾಯಬದ್ಧ ವೇಷಧಾರಿಯಾಗಿಯೇ ರಂಗಕ್ಕೆ ಬಂದವರು. ಅಳಿಕೆ ರಾಮಯ್ಯ ರೈ, ಕುರಿಯ ವಿಠಲ ಶಾಸ್ತ್ರಿ ಮತ್ತು ರಾಮನಾಯಕ್ ಅವರಿಂದ ನಾಟ್ಯ-ಅರ್ಥಗಾರಿಕೆಯನ್ನು ಅಭ್ಯಸಿಸಿದ್ದಲ್ಲದೆ ಬಣ್ಣದ ಮಾಲಿಂಗರೊಂದಿಗೆ ಬಣ್ಣದ ವೇಷದಲ್ಲೂ ಸೈ ಎನಿಸಿ ಮೆರೆದರು. 1959 ರಿಂದ 1973ರ ವರೆಗೆ ಧರ್ಮಸ್ಥಳ ಮೇಳದಲ್ಲಿ ಪುಂಡು ವೇಷ ಹಾಕಿ ರಂಗಸ್ಥಳ ಹುಡಿ ಹಾರಿಸಿದ ಅವರು 1973 ರಿಂದ 75ರತನಕ ಮುಲ್ಕಿ ಮೇಳದಲ್ಲಿ ರಾಜವೇಷ ತೊಟ್ಟು ರಾರಾಜಿಸಿದರು. 1977ರಿಂದ 81ರ ವರೆಗೆ ಕೂಡ್ಲು ಮೇಳದಲ್ಲಿ ಒಂದನೇ ಬಣ್ಣದ ವೇಷ ಧರಿಸಿ ಯಕ್ಷರಾತ್ರಿಗಳನ್ನು ನಡುಗಿಸಿದ ಪುಳಿಂಚ, ಇರುಳು ಬೆಳಗಾಗುವುದರಲ್ಲಿ ತನ್ನ ಪೌರಾಣಿಕ ಆವರಣವನ್ನು ಕಳಚಿ ತುಳು ಯಕ್ಷಗಾನದ ಹಾಸ್ಯಭೂಮಿಕೆಗಳಲ್ಲಿ ಪ್ರೇಕ್ಷಕರನ್ನು ಮರುಳುಗೊಳಿಸಿದರೆಂದರೆ ಅವರ ನಟನಾ ಸಾಮಥ್ರ್ಯಕ್ಕೆ ಬೇರೆ ನಿದರ್ಶನ ಬೇಕಿಲ್ಲ.
ಅಭಿಮನ್ಯು, ಭಾನುಕೋಪ, ಅರ್ಜುನ, ದೇವೇಂದ್ರ, ಕಂಸ, ರಾವಣ, ಹಿರಣ್ಯ ಕಶ್ಯಪ, ಮಹಿಷಾಸುರ, ಶೂರಪದ್ಮ ಇತ್ಯಾದಿ ಪಾರಂಪರಿಕ ಪಾತ್ರಗಳಲ್ಲಿ ವಿಜೃಂಭಿಸಿದ ಅವರು 1981 ರಿಂದ 2000 ದವರಗೆ ಕಲ್ಲಾಡಿ ವಿಠಲ ಶೆಟ್ಟರ ಕರ್ನಾಟಕ ಮೇಳದಲ್ಲಿ ಮಲ್ಲಯ ಬುದ್ಯಂತ, ನಕ್ಕುರ, ಸಿದ್ದು, ಸೋಂಪ ಪಾತ್ರಗಳಿಂದ ಪ್ರಸಿದ್ಧರಾದುದು ಇತಿಹಾಸ. ‘ಕಾಡಮಲ್ಲಿಗೆ’ ಪ್ರಸಂಗದ ‘ಸಿದ್ದು’ವಂತೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚೊತ್ತಿ ಹೋಗಿದೆ. ಕೃಷ್ಣಲೀಲೆಯ ‘ವೃದ್ಧಗೋಪಿಕೆ’ಯ ವಯ್ಯಾರ ಒಂದೆಡೆಯಾದರೆ’ ಚಂದ್ರಾವಳಿ ವಿಲಾಸ’ದ ಚಂದಗೋಪ, ‘ಮಾನಿಷಾದ’ದ ಹೆಡ್ಡ ಶಿಷ್ಯ ಅವರ ಮುಗ್ಧ ಮಂಕುತನದ ಪಾತ್ರಗಳಿಗೆ ಸಾಕ್ಷಿ.
ತುಳು ಯಕ್ಷಗಾನ ರಾಮಯ್ಯ ಶೆಟ್ಟರ ಬಣ್ಣದ ಬದುಕಿಗೆ ಹೊಸ ತಿರುವು ನೀಡಿತು. ಸಾಮಾಜಿಕ ವಿಷಯಗಳನ್ನು ಗ್ರಾಮೀಣ ಶೈಲಿಯಲ್ಲಿ ಪಡಿಮೂಡಿಸುವ ತುಳು ಬದುಕಿನ ವ್ಯಕ್ತಿ ಚಿತ್ರಣ, ನಂಜು-ಮಾತ್ಸರ್ಯ ಸಂಚುಗಾರಿಕೆಯ ಅಭಿವ್ಯಕ್ತಿಯಲ್ಲಿ ಅವರ ಪಾತ್ರ ನಿರ್ವಹಣೆ ಅಮೋಘ. ತಾನು ನಗದೆ ಇತರರನ್ನು ನಗಿಸುವ, ನಗುಬರಿಸುವ ಸಹಜ ಸಂಭಾಷಣೆಗಳಲ್ಲಿ ತಾನು ಗಂಭೀರವಾಗಿ ಪ್ರೇಕ್ಷಕರನ್ನು ಖುಷಿಪಡಿಸುವ ಕೌಶಲ್ಯದಿಂದ ಮಿಜಾರು ಅಣ್ಣಪ್ಪರ ಜೊತೆಗೆ ಅವರೂ ಅಷ್ಟೇ ತೂಕದ ಮತ್ತೊಬ್ಬ ಹಾಸ್ಯಗಾರರೇ ಆದರು.
ಈಗಿನ ಕೆಲವು ಮೇಳಗಳಲ್ಲಿ ಎರಡೆರಡು ಹಾಸ್ಯಗಾರರನ್ನು ಬಳಸಿಕೊಳ್ಳಲು ಅವರದ್ದೇ ಪ್ರೇರಣೆ ಎನ್ನಬಹುದೇನೋ. ರಾಮದಾಸ ಸಾಮಗರು, ಕೋಳ್ಯೂರು, ಮೀಜಾರು, ಅರುವರೊಂದಿಗೆ ರಾಮಯ್ಯ ಶೆಟ್ಟರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲ ಒಂದು ಕಾಲ ಘಟ್ಟದಲ್ಲಿ ಯಕ್ಷರಂಗದ ರಸಗವಳಗಳೇ ಆಗಿದ್ದವು.
ಜೀವನ ಯಾನ
ಪುಳಿಂಚ ರಾಮಯ್ಯ ಶೆಟ್ಟರ ಹುಟ್ಟೂರು ವಿಟ್ಲ ಸಮೀಪದ ಕೇಪು ಗ್ರಾಮದ ಮೈರ. ಕಾಸಗೋಡು ಜಿಲ್ಲೆಯ ಮಂಜೇಶ್ವರ ಮೂಡಂಬೈಲು ಗ್ರಾಮದ ಹೆಸರಾಂತ ಬೆಜ್ಜದ ಗುತ್ತು ಮನೆತನದವರು ಅವರು. 1939ರಲ್ಲಿ ದಿ. ಬಂಟಪ್ಪ ಶೆಟ್ಟಿ ಮತ್ತು ಉಂಞ್ಞಕ್ಕೆ ದಂಪತಿಗೆ ಜನಿಸಿದ ರಾಮಯ್ಯ ಶೆಟ್ಟಿ ಹೆತ್ತವರೊಂದಿಗೆ ಪುಣಚ (ತುಳುವಿನಲ್ಲಿ ಪುಳಿಂಚ)ದಲ್ಲಿ ನೆಲೆಸಿ ‘ಪುಳಿಂಚ’ ರೇ ಆದರು. ವಿಟ್ಲದ ಹತ್ತಿರ ಎರುಂಬು ಶಾಲೆಯಲ್ಲಿ ಆರನೇ ತರಗತಿ ಪೂರೈಸಿ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ (1953) ಶ್ರೀ ಧರ್ಮಸ್ಥಳ ಮೇಳ ಸೇರಿ ಕಟ್ಟುವೇಷ. ಕೋಡಂಗಿಯಾಗಿ ರಂಗಪ್ರವೇಶ ಮಾಡಿ ಪುಂಡು ವೇಷಧಾರಿಯಾಗಿ ಭಡ್ತಿ ಪಡೆದರು. ಬಳಿಕ ಕೂಡ್ಲು, ಇರಾ, ಕರ್ನಾಟಕ, ಕುದ್ರೋಳಿ, ಇರುವೈಲು ಮತ್ತು ಮೂಲ್ಕಿ ಮೇಳಗಳಲ್ಲಿ ಒಟ್ಟು 47ವರ್ಷಗಳ ಸುದೀರ್ಘ ತಿರುಗಾಟ ನಡೆಸಿ 2000 ಇಸವಿ ಮೇ28ಕ್ಕೆ ಯಕ್ಷಗಾನದಿಂದ ನಿವೃತ್ತಿ ಹೊಂದಿದರು.
ಕಲಾವಿದನಾಗಿ ಪುಳಿಂಚರದ್ದು ಬಹುಮುಖ ಸಾಧನೆ, 1963ರಲ್ಲಿ ಸಂಚಾರಿಮೇಳವನ್ನು ಕಟ್ಟಿ ಮೈಸೂರು, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಯಕ್ಷಗಾನದ ಕೀರ್ತಿ ಪತಾಕೆ ಹಾರಿಸಿದರು. ಗಜಾಸುರ ವಧೆ, ತಾಳಿಕೋಟೆ ಕದನ, ಶಾಂತಲಾ ಸ್ವಯಂವರ, ಭಾನುಸೇನಕಾಳಗ, ಅಜರಾಜ ವಿಜಯ, ಅತಿಕಾಯ ಕಾಳಗ, ವಿಜಯ ಸೇನ ವಿಜಯ – ಇತ್ಯಾದಿ ಪ್ರಸಂಗಗಳನ್ನು ರಚಿಸಿ ಯಕ್ಷಗಾನ ಸಾಹಿತ್ಯಕ್ಕೆ ಕೊಡುಗೆ ನೀಡಿರುವುದಲ್ಲದೆ ‘ಕನ್ನಡಿಗÀರ ಕರ್ಮಕಥೆ’ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಹಾಸ್ಯ ಪ್ರಸಂಗಗಳನ್ನು ಹೊಸೆದು ಅವುಗಳನ್ನು ಕ್ಯಾಸೆಟ್ ರೂಪದಲ್ಲಿ ಜನಪ್ರಿಯಗೊಳಿಸಿದ್ದಾರೆ. ಇವುಗಳಲ್ಲಿ ಮಾಮಿಗಾವಂದಿ ಮರ್ಮಲ್, ಯಮನ ಸೋಲು, ಲಚ್ಚುನ ಮದಿಮೆ ಮುಂತಾದ ಧ್ವನಿಸುರುಳಿಗಳು ಮಾರುಕಟ್ಟೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಕರಿಗೊಂಡಿವೆ.
ಪುತ್ತೂರು ವಿವೇಕಾನಂದ ಕಾಲೇಜು, ಬೀದರ್ ಕರ್ನಾಟಕ ಸಂಘ, ಬೇಲಾಡಿ ನಾಡ ಹಬ್ಬ, ಮುಂಬಯಿ ಬಂಟರ ಸಂಘ, ಬಾಳ್ತಿಲ ಯುವಕ ಮಂಡಲ, ತುಳುವ ಚಾವಡಿ ದಾಸಕೋಡಿ ಹೀಗೆ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ-ಪುರಸ್ಕಾರಗಳನ್ನು ಪಡೆದ ಪುಳಿಂಚ ರಾಮಯ್ಯ ಶೆಟ್ಟರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ತಮ್ಮ ಇಳಿವಯಸ್ಸಿನಲ್ಲಿ ಕಲ್ಲಡ್ಕ ಸಮೀಪದ ಬಾಳ್ತಿಲದ ‘ಚೆಂಡೆ’ ನಿವಾಸದಲ್ಲಿ ಪತ್ನಿ, ಓರ್ವಪುತ್ರ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದ ಅವರು ಅನಾರೋಗ್ಯದಿಂದ ವೇಷ ಮಾಡುವುದನ್ನು ನಿಲ್ಲಿಸಿದ್ದರು. ಆದರೂ ಕಲೆಯ ನಂಟನ್ನು ಬಿಡಲಾರದೆ ಕಲ್ಲಡ್ಕದ’ದಲ್ಲಿ ಶ್ರೀ ರಾಮ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ನಡೆಸುತ್ತಾ ಹಲವು ಶಿಷ್ಯರನ್ನು ರಂಗಕ್ಕೆ ನೀಡಿದ್ದರು.
ಇಂದು ಪುಳಿಂಚ ರಾಮಯ್ಯ ಶೆಟ್ಟರು ನಮ್ಮೊಂದಿಗಿಲ್ಲ. ಜುಲೈ 22,2002ರಲ್ಲಿ ಅವರು ವಿಧಿವಶರಾದರು. ಅವರು ಗತಿಸಿ ದಶಕಗಳೇ ಸಂದಿವೆ. ಆದರೂ ಕಲಾಭಿಮಾನಿಗಳನ್ನು ನಿರಂತರ ಕಾಡುವ ದಶಾವತಾರಿ ಪುಳಿಂಚ ಈಗಲೂ ಜನಮನದಲ್ಲಿ ಹಾಗೆಯೇ ಉಳಿದಿದ್ದಾರೆ.
ಪುಳಿಂಚ ಸೇವಾ ಪ್ರತಿಷ್ಠಾನ
ಪುಳಿಂಚ ರಾಮಯ್ಯ ಶೆಟ್ಟರು ತಮ್ಮ ವಿಶಿಷ್ಟವಾದ ಪಾತ್ರ ನಿರ್ವಹಣೆ ಮತ್ತು ವರ್ಣರಂಜಿತ ವ್ಯಕ್ತಿತ್ವದಿಂದ ಯಕ್ಷಗಾನದ ನವರಸ ನಾಯಕನಾಗಿ ರಸಿಕರ ಮನ ಗೆದ್ದವರು. ಅವರ ಪುತ್ರ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಅವರ ನೇತೃತ್ವದಲ್ಲಿ ಸ್ಥಾಪನೆಯಾದ `ಪುಳಿಂಚ ಸೇವಾ ಪ್ರತಿಷ್ಠಾನ’ದ ವತಿಯಿಂದ 2013ರಲ್ಲಿ ಪ್ರಾರಂಭವಾದ ಪುಳಿಂಚ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಪ್ರತಿ ಮೂರು ವರ್ಷಗಳಿಗೊಮ್ಮೆ ಪುಳಿಂಚರ ಕಾಯಕ ಕ್ಷೇತ್ರವಾಗಿದ್ದ ಬಾಳ್ತಿಲ ಗ್ರಾಮದ ಚೆಂಡೆ `ಪುಳಿಂಚ ಫಾರ್ಮ್ ಹೌಸ್’ನಲ್ಲಿ ನಡೆಯುತ್ತಿದೆ.
ಪುಳಿಂಚ ರಾಮಯ್ಯ ಶೆಟ್ಟರ ಒಡನಾಡಿಗಳಾಗಿದ್ದ ಹಿರಿಯ ಕಲಾವಿದರನ್ನೇ ಆಯ್ಕೆ ಮಾಡಿ ಪ್ರಶಸ್ತಿ ನೀಡುವುದು `ಪುಳಿಂಚ ಸೇವಾ ಪ್ರತಿಷ್ಠಾನ’ದ ವೈಶಿಷ್ಟ್ಯ. ಅದರಲ್ಲಿ ಪ್ರಮುಖರಾದವರು ಅರುವ ಕೊರಗಪ್ಪ ಶೆಟ್ಟಿ (2013), ಡಾ. ಕೋಳ್ಯೂರು ರಾಮಚಂದ್ರ ರಾವ್, ಕುಂಬ್ಳೆ ಸುಂದರ ರಾವ್, ಕೆ.ಎಚ್. ದಾಸಪ್ಪ ರೈ, ದಿ. ಮಿಜಾರು ಅಣ್ಣಪ್ಪ, ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ದಿ. ಅನಂತರಾಮ ಬಂಗಾಡಿ (2010), ದಿನೇಶ್ ಅಮ್ಮಣ್ಣಾಯ, ಶಿವರಾಮ ಜೋಗಿ ಬಿ.ಸಿ. ರೋಡು, ಪುಂಡರೀಕಾಕ್ಷ ಉಪಾಧ್ಯಾಯ (2019), ಬಾಯಾರು ರಘುನಾಥ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ಜಪ್ಪು ದಯಾನಂದ ಶೆಟ್ಟಿ, ಮುಂಡಾಜೆ ಬಾಲಕೃಷ್ಣ ಶೆಟ್ಟಿ ಮತ್ತು ದಿ. ಬೆಳ್ಳಾರೆ ವಿಶ್ವನಾಥ ರೈ (2022). ಅಲ್ಲದೆ ದೈವನರ್ತಕ ದಿ. ಪದ್ಮ ಪಂಬದ ಮತ್ತು ಪೊಲೀಸ್ ಅಧಿಕಾರಿ ಕೇಪು ಗೌಡರಿಗೆ ಪುಳಿಂಚ ಸೇವಾರತ್ನ ಪುರಸ್ಕಾರಗಳನ್ನು ನೀಡಲಾಗಿದೆ. ಕರ್ನಾಟಕ ಮೇಳದಲ್ಲಿ ಟೆಂಟಿನ ಮೇಸ್ತ್ರಿಯಾಗಿ ದುಡಿದ ಮಾರಪ್ಪ ಪೂಜಾರಿ ಚೆಂಡೆ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ಕು. ಜೀವಿತ ಚೆಂಡೆ ಅವರನ್ನು ನಿಧಿ ಸಹಾಯದೊಂದಿಗೆ ಸನ್ಮಾನಿಸಲಾಗಿದೆ.
ಪ್ರತಿಷ್ಠಾನವು 2016ರಲ್ಲಿ ಪ್ರಕಟ ಮಾಡಿದ `ಪುಳಿಂಚ ಸ್ಮøತಿ-ಕೃತಿ’ (ಸಂ. ಭಾಸ್ಕರ ರೈ ಕುಕ್ಕುವಳ್ಳಿ) ಗ್ರಂಥ ಹಾಗೂ `ಪುಳಿಂಚ : ಜೀವನ-ಸಾಧನೆ’ ಸಾಕ್ಷ್ಯಚಿತ್ರಗಳು ಪುಳಿಂಚರ ನೆನಪನ್ನು ಶಾಶ್ವತಗೊಳಿಸಿವೆ. ಅಲ್ಲದೆ ಪರಿಸರಜಾಗೃತಿ ಮೂಡಿಸುವ ಸಲುವಾಗಿ ಗಿಡ ನೆಡುವ ಕಾರ್ಯಕ್ರಮ, ಕೊರೋನಾ ಸಂತ್ರಸ್ತರಿಗೆ ಕಿಟ್ ವಿತರಣೆ ಹಾಗೂ ಇತರ ಸೌಲಭ್ಯಗಳು, ಸಾರ್ವಜನಿಕರಿಗಾಗಿ ವೈದ್ಯಕೀಯ ಶಿಬಿರ, ಕಣ್ಣಿನ ಶಸ್ತ್ರಚಿಕಿತ್ಸೆ, ಅಶಕ್ತರಿಗೆ ಆರ್ಥಿಕ ಸಹಾಯ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಮೊದಲಾದ ಸೇವಾಕಾರ್ಯಗಳ ಮೂಲಕ ಪುಳಿಂಚ ಸೇವಾ ಪ್ರತಿಷ್ಠಾನ ಸಹೃದಯರ ಮನ ಗೆದ್ದಿದೆ.
ಲೇ : ಭಾಸ್ಕರ ರೈ ಕುಕ್ಕುವಳ್ಳಿ
`ವಿದ್ಯಾ’ ಕದ್ರಿಕಂಬಳ ರಸ್ತೆ, ಬಿಜೈ
ಮಂಗಳೂರು – 575 004