ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿ ಮನೆ ಹಸ್ತಾಂತರ…
ಪುತ್ತೂರು: ಮೂರು ಹೊತ್ತು ಊಟ, ತಲೆಯ ಮೇಲೊಂದು ಸೂರು, ಅಗತ್ಯ ಬಟ್ಟೆ ಬರೆ ಇವು ಮಾನವನ ಜೀವನದ ಮೂಲ ಆವಶ್ಯಕತೆಗಳು. ಇದನ್ನೇ ಹೊಂದಿಸಿಕೊಳ್ಳುವುದಕ್ಕೆ ಅಸಾಧ್ಯವಾದ ಅನೇಕ ಕುಟುಂಬಗಳು ನಮ್ಮ ಸುತ್ತಮುತ್ತಲಿವೆ. ಅವರನ್ನು ಗುರುತಿಸಿ ಆವಶ್ಯಕತೆಗನುಗುಣವಾಗಿ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು, ಕುಳ ಗ್ರಾಮ ಪಂಚಾಯತ್ ಹಾಗೂ ಇತರ ದಾನಿಗಳ ಸಹಕಾರದೊಂದಿಗೆ ಕುಳ ಗ್ರಾಮದ ಸೆಕೆಹಿತ್ಲುವಿನಲ್ಲಿ ನಿರ್ಮಿಸಿದ ಮನೆಯನ್ನು ಫಲಾನುಭವಿಗಳಾದ ಶ್ರೀಮತಿ ಗೀತಾ ಈಶ್ವರ ನಲಿಕೆ ಅವರಿಗೆ ಹಸ್ತಾಂತರಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಾವು ಪಡೆದ ಒಂದಶವನ್ನಾದರೂ ಸಮಾಜಕ್ಕೆ ನೀಡುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದೂ ಅವರು ಹೇಳಿದರು.
ಪುತ್ತೂರಿನ ಮಾಸ್ಟರ್ ಪ್ಲಾನರಿಯ ಆಕಾಶ್ ಮಾತನಾಡಿ ಹಿಂದುಳಿದವರಿಗೆ ಸಹಾಯ, ನಿರ್ವಸಿತರಿಗೆ ವಸತಿ ಸೌಲಭ್ಯ, ಅರ್ಹರಿಗೆ ಆವಶ್ಯಕ ವಸ್ತುಗಳನ್ನು ಒದಗಿಸುವ ಗ್ರಾಮವಿಕಾಸ ಯೋಜನೆಯು ಉತ್ತಮವಾಗಿದ್ದು ಇದನ್ನು ಮುನ್ನಡೆಸುತ್ತಿರುವ ಎಲ್ಲರೂ ಅಭಿನಂದನಾರ್ಹರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಪಿ.ಸತೀಶ್ ರಾವ್ ಮಾತನಾಡಿ ವಿವೇಕಾನಂದ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದರ ಜತೆಯಲ್ಲಿ ಸಮಾಜದ ಅಪೇಕ್ಷೆಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನೂ ಕಲಿಸಿಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಮ ಭಟ್ ನೀರಪಳಿಕೆ, ನಿರ್ದೇಶಕ ಸುಂದರ ಗೌಡ ಪಾಂಡೇಲು, ಇಡ್ಕಿದು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ತಿಮ್ಮಪ್ಪ ಮಂಜಪಾಲು, ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿಶ್ವನಾಥ ಗುರ್ಜಿನಡ್ಕ ಉಪಸ್ಥಿತರಿದ್ದರು.
ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಶಿಂಧೆ, ಗ್ರಾಮ ವಿಕಾಸ ಯೋಜನೆಯ ಪದಾಧಿಕಾರಿಗಳಾದ ರಕ್ಷಿತ್.ಪಿ, ರಾಜೇಶ್ ಹಾಗೂ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದರು.
ಪಂಚಾಯತ್ ಸದಸ್ಯ ಚಿದಾನಂದ ಪೆಲತಿಂಜ ಸ್ವಾಗತಿಸಿದರು. ಗ್ರಾಮವಿಕಾಸ ಯೋಜನೆಯ ಸಂಚಾಲಕಿ ಡಾ.ಸೌಮ್ಯ.ಎನ್.ಜೆ ಪ್ರಸ್ತಾವನೆಗೈದರು. ಪ್ರೊ.ಪ್ರಭಾ.ಜಿ.ಎಸ್ ಕಾರ್ಯಕ್ರಮ ನಿರೂಪಿಸಿದರು.