ಪುತ್ತೂರು ಗಾಂಧೀ ಕಟ್ಟೆ ಸ್ಥಳದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ನುಡಿನಮನ….
ಪುತ್ತೂರು: ಕಾಮಗಾರಿ ಹಿನ್ನಲೆಯಲ್ಲಿ ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಐತಿಹಾಸಿಕ ಸ್ಥಳವಾದ ಗಾಂಧಿ ಕಟ್ಟೆಯಲ್ಲಿನ ಗಾಂಧಿ ಪ್ರತಿಮೆ ಹಾಗೂ ಕಟ್ಟೆಯನ್ನು ತೆರವುಗೊಳಿಸಿರುವ ಹಿನ್ನಲೆಯಲ್ಲಿ ಬುಧವಾರ ಗಾಂಧೀಜಿಯ ಭಾವ ಚಿತ್ರವನ್ನು ಇರಿಸಿ ಸಾಂಕೇತಿಕ ಗಾಂಧಿ ಜಯಂತಿ ಆಚರಿಸಲಾಯಿತು. ಗಾಂಧೀಜಿಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗಾಂಧಿ ನಮನ ಸಲ್ಲಿಸಲಾಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು 1934ರಲ್ಲಿ ಪುತ್ತೂರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಗಾಂಧೀ ಕಟ್ಟೆಯ ಬಳಿಯಲ್ಲಿದ್ದ ಅಶ್ವತ್ಥ ವೃಕ್ಷದ ಅಡಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಇಲ್ಲಿ ಗಾಂಧಿ ಕಟ್ಟೆ ನಿರ್ಮಾಣಗೊಂಡಿದ್ದು, ಗಾಂಧೀಜಿಯ ಪ್ರತಿಮೆಯನ್ನು ಇರಿಸಲಾಗಿತ್ತು. ಇದೀಗ ಕಾಮಗಾರಿಯ ಹಿನ್ನಲೆಯಲ್ಲಿ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ. ಗಾಂಧಿ ಪ್ರತಿಮೆ ಇಲ್ಲದ ಕಾರಣದಿಂದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಎಚ್.ಕೆ. ಕೃಷ್ಣಮೂರ್ತಿ, ತಹಸೀಲ್ದಾರ್ ಅನಂತ ಶಂಕರ್, ನಗರಸಭೆ ಪೌರಾಯುಕ್ತರಾದ ರೂಪಾ ಶೆಟ್ಟಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಕಂದಾಯ ನಿರೀಕ್ಷಕ ದಯಾನಂದ್, ಗಾಂಧಿ ಕಟ್ಟೆ ಅಭಿವೃದ್ಧಿ ಸಮಿತಿಯ ಕೃಷ್ಣ ಪ್ರಸಾದ್ ಆಳ್ವಾ, ಸಯ್ಯದ್ ಕಮಾಲ್, ಪ್ರಮುಖರಾದ ಸನಮ್ ಮತ್ತಿತರರು ಉಪಸ್ಥಿತರಿದ್ದರು.
ಗಾಂಧಿ ಕಟ್ಟೆ ಅಭಿವೃದ್ಧಿ ಕಾಮಗಾರಿ ವಿರುದ್ಧ ಖಾಸಗಿ ವ್ಯಕ್ತಿಯೊಬ್ಬರು ಹೈಕೋರ್ಟ್‍ನಲ್ಲಿ ದಾವೆ ಹೂಡಿರುವ ಕಾರಣ ನ್ಯಾಯಾಲಯ ಕಾಮಗಾರಿಗೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಗಾಂಧಿ ಕಟ್ಟೆಯ ಕೆಲಸ 4 ತಿಂಗಳಿನಿಂದೀಚೆಗೆ ಅರ್ಧದಲ್ಲಿ ನಿಂತಿದೆ. ಕಾಮಗಾರಿ ಕಾರಣದಿಂದ ಗಾಂಧಿ ಪ್ರತಿಮೆಯನ್ನು ನಗರಸಭೆ ಸ್ಥಳಾಂತರಿಸಿ ತನ್ನ ಲಾಕರ್ ನಲ್ಲಿ ಇರಿಸಿದೆ.
ನಗರಸಭೆಯು ಹೈಕೋರ್ಟ್‍ನಲ್ಲಿ ವಕೀಲರಾದ ಕೇಶವ ಭಟ್ ಮೂಲಕ ಈ ಕೇಸ್ ನಡೆಸುತ್ತಿದೆ. ವಾಯಿದೆ ಇನ್ನೂ ಒಂದು ತಿಂಗಳು ಮುಂದಕ್ಕೆ ಹೋಗಿದೆ. ಹೀಗಾಗಲಿ ಈ ಬಾರಿ ನಮ್ಮ ನಿರೀಕ್ಷೆ ಈಡೇರಲಿಲ್ಲ ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಹೇಳಿದ್ದಾರೆ.